ದುಬೈ(ಅ.10)  ನಾಯಕ ವಿರಾಟ್ ಕೊಹ್ಲಿ ಸಿಡಿಸಿದ  90 ರನ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 169 ರನ್ ಸಿಡಿಸಿದೆ. ಸಿಎಸ್‌ಕೆ ಬೌಲಿಂಗ್ ದಾಳಿಗೆ ದಿಟ್ಟ  ಹೋರಾಟ ನೀಡಿದ ಆರ್‌ಸಿಬಿ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ಮೊತ್ತ ಪೇರಿಸಿತು.

ದುಬೈ ಕ್ರೀಡಾಂಗಣದ ಸೋಲು ಗೆಲುವಿನ ಲೆಕ್ಕಾಚಾರ ಅಳದ ಆರ್‌ಸಿಬಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಸ್ಫೋಟಕ ಆರಂಭ ಸಿಗಲಿಲ್ಲ. ಆ್ಯರೋನ್ ಫಿಂಚ್ ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ದೇವದತ್ ಪಡಿಕ್ಕಲ್ ತಂಡಕ್ಕೆ ಆಸರೆಯಾದರು. ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು.

ಪಡಿಕ್ಕಲ್ 33 ರನ್ ಸಿಡಿಸಿ ಔಟಾದರು. ಎಬಿ ಡಿವಿಲಿಯರ್ಸ್ ಡಕೌಟ್ ಆಗೋ ಮೂಲಕ ಆರ್‌ಸಿಬಿ ಪ್ರಮುಖ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ವಾಶಿಂಗ್ಟನ್ ಸುಂದರ್ ನೆರವಾಗಲಿಲ್ಲ. 93 ರನ್‌ಗೆ 4 ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡಕ್ಕೆ ಕೊಹ್ಲಿ ಆಸರೆಯಾದರು.

ಕೊಹ್ಲಿ ಹಾಗೂ ಶಿವಂ ದುಬೆ ಹೋರಾಟದಿಂದ ಆರ್‌ಸಿಬಿ ರನ್ ವೇಗ ಹೆಚ್ಚಾಯಿತು. ಕೊಹ್ಲಿ 52 ಎಸೆತದಲ್ಲಿ ಅಜೇಯ 90 ರನ್ ಸಿಡಿಸಿದರೆ, ದುಬೆ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು.