ಶಿಖರ್‌ ಧವನ್ ಅವರನ್ನು ಟ್ರೋಲ್‌ ಮಾಡಲು ಹೋಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯುಜುವೇಂದ್ರ ಚಹಲ್ ಟ್ರೋಲ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಆ.27): ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2020ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಯುಎಇನ ಮೂರು ಮೈದಾನಗಳಾದ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ ಪಂದ್ಯಾವಳಿಗಳು ನಡೆಯಲಿವೆ. 

ಈಗಾಗಲೇ ಎಲ್ಲಾ 8 ತಂಡಗಳು ದುಬೈ ತಲುಪಿದ್ದು, ಪ್ರಸ್ತುತ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿವೆ. ಈಗಾಗಲೇ ಅಭಿಮಾನಿಗಳಲ್ಲಿ ಐಪಿಎಲ್ ಜ್ವರ ಶುರುವಾಗಿದೆ. ಮಂಗಳವಾರ(ಆ.25) ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದು, ದುಬೈನಲ್ಲಿನ ಬೆಳಕು ಮಂದಹಾಸ ಮೂಡಿಸಿದೆ ಎಂದು ಬರೆದುಕೊಂಡಿದ್ದರು.

View post on Instagram

ಗಬ್ಬರ್ ಸಿಂಗ್ ಕಾಲೆಳೆದ ಕುಲ್ದೀಪ್-ಚಹಲ್:

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಮಣಿಕಟ್ಟು ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಹಲ್ ನಾ ಮುಂದು ತಾ ಮುಂದು ಎನ್ನುವಂತೆ ಕಾಲೆಳೆಯಲು ಮುಂದಾಗಿದ್ದಾರೆ. ಮೊದಲಿಗೆ ಕುಲ್ದೀಪ್, ಧವನ್‌ಗೆ ತಲೆಕೂದಲುಗಳು ಬೆಳೆದಿವೆ ಎಂದು ತಮಾಷೆ ಮಾಡಿದ್ದಾರೆ. 

ಬಳಿಕ ಕುಲ್ದೀಪ್‌ಗೆ ಸಾಥ್ ನೀಡಿದ ಚಹಲ್, ಭಾಭಿ ಹೇಗಿದ್ದರೂ ಈಗ ಆಸ್ಟ್ರೇಲಿಯಾದಲ್ಲಿದ್ದಾರೆ. ಹೀಗಾಗಿ ಅಣ್ಣನಿಗೆ ಹೊಡೆತಗಳು ಬೀಳುತ್ತಿಲ್ಲ. ಜೊತಗೆ ಯಾವುದೇ ತಲೆಬಿಸಿ ಇಲ್ಲ. ಆದ್ದರಿಂದ ಧವನ್‌ ಅಣ್ಣನಿಗೆ ಮತ್ತಷ್ಟು ತಲೆಗೂದಲು ಬೆಳೆಯಬಹುದು ಎಂದು ಕಾಲೆಳೆದಿದ್ದಾರೆ. 

ಇವರ ತರಲೆ ಮಾತುಗಳನ್ನು ಗಮನಿಸುತ್ತಿದ್ದ ಧವನ್ ಕೊನೆಗೂ ಚಹಲ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ನಾವೆಲ್ಲ ಮದುವೆಯಾಗಿ ಸಾಕಷ್ಟು ವರ್ಷವಾಗಿದೆ. ನೀನಿನ್ನು ಹೊಸಬ, ಈಗ ತಾನೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೀಯ. ಯಾವುದಕ್ಕೂ ನೀನು ಹುಷಾರಾಗಿರು, ಇಲ್ಲದಿದ್ದರೆ ನಿನ್ನ ಮುಂದಿನ ಹಲ್ಲು ಮುರಿಸಿಕೊಳ್ಳುತ್ತೀಯ ಎಚ್ಚರ ಎಂದು ಧವನ್ ತಿರುಗೇಟು ನೀಡಿದ್ದಾರೆ.