ಅಬು ಧಾಬಿ(ಸೆ.29):  ಐಪಿಎಲ್ 2020 ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲು ಕಂಡಿದೆ. ಸತತ 2 ಸೋಲು ಕಂಡು ನಿರಾಸೆ ಅನುಭವಿಸಿದ್ದ ಸನ್‌‌ರೈಸರ್ಸ್ ಹೈದರಾಬಾದ್, ಬಲಿಷ್ಠ ಡೆಲ್ಲಿ ತಂಡವನ್ನೇ ಸೋಲಿಸಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಿತು. ಈ ಮೂಲಕ ಡೆಲ್ಲಿ ವಿರುದ್ಧ 15 ರನ್ ಗೆಲುವು ದಾಖಲಿಸಿತು.

163 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಹೋರಾಟ ಮುಂದುವರಿಸಿದರು. ನಾಯಕ ಶ್ರೇಯಸ್ ಅಯ್ಯರ್ 17 ರನ್ ಸಿಡಿಸಿ ಔಟಾದರು. ಇತ್ತ ಆಸರೆಯಾಗಿದ್ದ ಶಿಖರ್ ಧವನ್ 34 ರನ್ ಸಿಡಿಸಿ ಔಟಾದರು. 

ರಿಷಬ್ ಪಂತ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು.  ಶಿಮ್ರೊನ್ ಹೆಟ್ಮೆಯರ್ ಹಾಗೂ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು, ಡೆಲ್ಲಿ ಗೆಲುವಿಗೆ ಅಂತಿಮ 30 ಎಸೆತದಲ್ಲಿ 59 ರನ್‌ಗಳ ಅವಶ್ಯಕತೆ ಇತ್ತು.

ಶಿಮ್ರೊನ್ ಹೆಟ್ಮೆಯರ್ 21 ರನ್ ಸಿಡಿಸಿ ಔಟಾದರು. ಈ ಮೂಲಕ ಡೆಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಇತ್ತ ರಿಷಬ್ ಪಂತ್ ಕೂಡ 28 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ ಕೇವಲ 11 ರನ್ ಸಿಡಿಸಿ ಔಟಾದರು. ಡೆಲ್ಲಿ ಗೆಲುವಿಗೆ ಅಂತಿಮ 6 ಎಸೆತದಲ್ಲಿ 28 ರನ್ ಅವಶ್ಯಕತೆ ಇತ್ತು.

ಕ್ರೀಸ್‌ನಲ್ಲಿದ್ದ ಅಕ್ಸರ್ ಪಟೆಲ್ ಹಾಗೂ ಕಾಗಿಸೋ ರಬಾಡ ಹೋರಾಟ ಸಾಕಾಗಲಿಲ್ಲ. ಅಂತಿಮವಾಗಿ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 15 ರನ್ ಗೆಲುವು ಸಾಧಿಸಿತು. 13ನೇ ಆವೃತ್ತಿಯಲ್ಲಿ ಹೈದರಾಬಾದ್ ಮೊದಲ ಗೆಲುವು ದಾಖಲಿಸಿತು.