ದುಬೈ(ಆ.27): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಆಡುವ ಹನ್ನೊಂದರ ಬಳಗ ಹೇಗಿರಬೇಕು ಎನ್ನುವುದರ ಬಗ್ಗೆ ಲೆಕ್ಕಾಚಾರ ಹಾಕಲಾರಂಭಿಸಿವೆ.

ಇಂತಹ ಸಂದರ್ಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಕಳೆದ ಡಿಸೆಂಬರ್‌ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಆ್ಯರೋನ್‌ ಫಿಂಚ್‌ ಅವರನ್ನು ಬರೋಬ್ಬರಿ 4.4 ಕೋಟಿ ರುಪಾಯಿ ನೀಡಿ ಖರೀದಿಸಿದ್ದೇಕೆ ಎನ್ನುವ ರಹಸ್ಯವನ್ನು ಹೊರಹಾಕಿದ್ದಾರೆ. ಸಾಕಷ್ಟು ಅಳೆದು-ತೂಗಿ ಫಿಂಚ್ ಅವರನ್ನು ಖರೀದಿಸಿದ್ದಾಗಿ ಕ್ಯಾಟಿಚ್ ಹೇಳಿದ್ದಾರೆ.

ನಾವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವವಿರುವ ಹಾಗೆಯೇ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರ ಹುಡುಕಾಟದಲ್ಲಿದ್ದೆವು. ಆಗ ನಮ್ಮ ಕಣ್ಣಿಗೆ ಬಿದ್ದಿದ್ದು ಆ್ಯರೋನ್ ಫಿಂಚ್. ಫಿಂಚ್ 61 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 1989 ರನ್ ಬಾರಿಸಿದ್ದಾರೆ. ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಫಿಂಚ್ ಮೂರನೇ ಸ್ಥಾನದಲ್ಲಿದ್ದಾರೆ. ಇದರ ಜತೆಗೆ ಡೇಲ್ ಸ್ಟೇನ್ ಹಾಗೂ ಎಬಿ ಡಿವಿಲಿಯರ್ಸ್ ಕೂಡಾ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ ಎಂದು ಕ್ಯಾಟಿಚ್ ಹೇಳಿದ್ದಾರೆ.

ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

ವಿಡಿಯೋ ಮಾತುಕತೆ ವೇಳೆ ನಾವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಅನುಭವ ಇರುವ ಆಟಗಾರರ ನಿರೀಕ್ಷೆಯಲ್ಲಿದ್ದೆವು. ಫಿಂಚ್ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಒಬ್ಬ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಹಾಗೆಯೇ ನಾಯಕನಾಗಿ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸ್ಪಿನ್‌ ಬೌಲಿಂಗ್‌ ಅನ್ನು ಸರಾಗವಾಗಿ ಎದುರಿಸುವ ಫಿಂಚ್ ತಂಡಕ್ಕೆ ನಾಯಕತ್ವದ ಅನುಭವವನ್ನು ಧಾರೆ ಎರೆಯಲಿದ್ದಾರೆ. ಹೀಗಾಗಿ ಅವರಿಗೆ 4.4 ಕೋಟಿ ನೀಡಿ ಖರೀದಿಸಿದೆವು ಎಂದು ಕ್ಯಾಟಿಚ್ ಹೇಳಿದ್ದಾರೆ.

ಕಳೆದ ವರ್ಷ ಕೋಲ್ಕತಾದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ತಂಡಕ್ಕೆ ಅಗತ್ಯವಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಡೆತ್ ಓವರ್‌ ಸಮಸ್ಯೆಗೆ ಪರಿಹಾರವಾಗಿ ಕ್ರಿಸ್ ಮೋರಿಸ್, ಡೇಲ್ ಸ್ಟೇನ್ ಹಾಗೂ ಕೇನ್‌ ರಿಚರ್ಡ್‌ಸನ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.