ನವದೆಹಲಿ(ಸೆ.08): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಘಾತಕಾರಿ ಸೋಲು ಕಂಡಿದ್ದು, ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಕಾದಾಡಲು ಸಜ್ಜಾಗಿದೆ.

ನವೆಂಬರ್ 08ರಂದು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್.

ಕಳೆದ 6 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಗುತ್ತಿದೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾಗುತ್ತಿರುವುದು ಡೆಲ್ಲಿ ತಂಡದ ತಲೆನೋವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಪೃಥ್ವಿ ಶಾ ಮೂರು ಬಾರಿ ಸೊನ್ನೆ, ಒಮ್ಮೆ 7, 9 ಹಾಗೂ 10 ರನ್ ಬಾರಿಸಿ ನಿರಾಸೆ ಅನುಭವಿಸಿದ್ದಾರೆ. ಮತ್ತೊಂದೆಡೆ ಅಜಿಂಕ್ಯ ರಹಾನೆ ಆರ್‌ಸಿಬಿ ವಿರುದ್ಧ ಆಕರ್ಷಕ 60 ರನ್ ಬಾರಿಸಿದರಾದರೂ ಡೆಲ್ಲಿ ಪರ 6 ಪಂದ್ಯಗಳ ಪೈಕಿ 2 ಬಾರಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.

ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಜತೆ ಯಾರು ಇನಿಂಗ್ಸ್ ಆರಂಭಿಸಬೇಕು ಎನ್ನುವ ಪ್ರಶ್ನೆ ಜೋರಾಗಿದೆ. ಇದಕ್ಕೆ ಡೆಲ್ಲಿ ಮಾಜಿ ಕ್ರಿಕೆಟ್ ಗೌತಮ್ ಗಂಭೀರ್ ಉಪಯುಕ್ತ ಸಲಹೆಯೊಂದನ್ನು ನೀಡಿದ್ದು, ಧವನ್ ಜತೆ ಪೃಥ್ವಿ ಇನಿಂಗ್ಸ್ ಆರಂಭಿಸಲಿ ಎಂದಿದ್ದಾರೆ.

IPL 2020: ಹೈದರಾಬಾದ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್?

ಪೃಥ್ವಿ ಶಾ ಫಾರ್ಮ್‌ನಲ್ಲಿಲ್ಲ ಎನ್ನುವುದು ಸತ್ಯ, ಆದರೆ ಪವರ್‌ ಪ್ಲೇನಲ್ಲಿ ಪೃಥ್ವಿ ಯಾವತ್ತೂ ಬೇಕಿದ್ದರೂ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಆರು ಓವರ್ ಪೃಥ್ವಿ ಬ್ಯಾಟಿಂಗ್ ಮಾಡಿದರೆ ಸಾಕಷ್ಟು, ತಂಡದ ಖಾತೆಗೆ ಸಾಕಷ್ಟು ರನ್ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ. ಇನ್ನು ಉತ್ತಮ ಫಾರ್ಮ್‌ನಲ್ಲಿರು ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗಂಭೀರ್ ಸಲಹೆ ನೀಡಿದ್ದಾರೆ