ದುಬೈ(ನ.10):  ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆ ಬರೆದಿದೆ. 5ನೇ ಬಾರಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. 13ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗುಬಡಿದು ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲೋ ಡೆಲ್ಲಿ ಕ್ಯಾಪಿಟಲ್ಸ್ ಕನಸು ನುಚ್ಚುನೂರಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

6 ಬಾರಿ ಫೈನಲ್ ಪ್ರವೇಶಿಸಿದೆ ಮುಂಬೈ ಇಂಡಿಯನ್ಸ್ 5 ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಗರಿಷ್ಟ ಟ್ರೋಫಿ ಗದ್ದ ಪಟ್ಟಿಯಲ್ಲಿ 3 ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ 2ನೇ ಸ್ಥಾನದಲ್ಲಿದೆ.  

13ನೇ ಆವೃತ್ತಿ ಟ್ರೋಫಿ ಗೆಲುವಿಗೆ 157 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಡೀಸೆಂಟ್ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 45 ರನ್ ಜೊತೆಯಾಟ ನೀಡಿತು. ಡಿಕಾಕ್ 20 ರನ್ ಸಿಡಿಸಿ ಮಾರ್ಕಸ್ ಸ್ಟೊಯ್ನಿಸ್‌ಗೆ ವಿಕೆಟ್ ಒಪ್ಪಿಸಿದರು.

ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 19 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 

ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಗೆಲುವಿನತ್ತ ಹೆಜ್ಜೆ ಇಟ್ಟಿತು. ರೋಹಿತ್ ಶರ್ಮಾ 51 ಎಸೆತದಲ್ಲಿ 68 ರನ್ ಸಿಡಿಸಿ ಔಟಾದರು. ಇನ್ನು ಕೀರನ್ ಪೊಲಾರ್ಡ್ ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮುಂಬೈ ತಂಡಕ್ಕೆ ಆತಂಕಕ್ಕೆ ಒಳಗಾಗಲಿಲ್ಲ.  ಇಶಾನ್ ಕಿಶನ್ ಹೋರಾಟ ಮುಂದುವರಿಸಿದರು. ಇನ್ನೇನು ಮುಂಬೈ ಗೆಲುವಿಗೆ 1 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡಿತು. 

ಕ್ರುನಾಲ್ ಪಾಂಡ್ಯ 1 ರನ್ ಸಿಡಿಸಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.  ಇಶಾನ್ ಕಿಶನ್ ಅಜೇಯ 33 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 5ವಿಕೆಟ್ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ 2020ರ ಐಪಿಎಲ್ ಟ್ರೋಫಿ ವಶಪಡಿಸಿಕೊಂಡಿತು.