ದುಬೈ(ಸೆ.25): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ದಿಟ್ಟ ಹೋರಾಟ ನೀಡಿದೆ.  ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಹೋರಾಟದಿಂದ  ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ಕೊಂಚ  ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 94 ರನ್ ಜೊತೆಯಾಟ ನೀಡಿತು. ಅಪಾಯದ ಸೂಚನೆ ನೀಡಿದ ಧವನ್ ಹಾಗೂ ಪೃಥ್ವಿ ಪಾರ್ಟ್ನರ್‌ಶಿಪ್ ಬ್ರೇಕ್ ಮಾಡಲು, ನಾಯಕ ಧೋನಿ ಪಿಯೂಷ್ ಚಾವ್ಲಾ ಸ್ಪಿನ್ ಅಸ್ತ್ರ ಬಳಸಿದರು.

ಚಾವ್ಲಾ ಸ್ಪಿನ್ ಮೋಡಿಗೆ 27 ಎಸೆತದಲ್ಲಿ 35 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. ಇತ್ತ ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ಪೃಥ್ವಿ ಶಾ 64 ರನ್ ಸಿಡಿಸಿ ನಿರ್ಗಮಿಸಿದರು. ಇಬ್ಬರೂ ಆರಂಭಿಕರೂ ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. 

ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಡೆಲ್ಲಿ ಮತ್ತೆ ಚೇತರಿಸಿಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ 26ರನ್ ಸಿಡಿಸಿ ಔಟಾದರು. ಪಂತ್ ಅಜೇಯ 37 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ. 

ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆಗಳಾಗಿವೆ. ಇಂಜುರಿಯಾದ ಆರ್ ಅಶ್ವಿನ್ ಬದಲು ಅಮಿತ್ ಮಿಶ್ರಾ ಆಗಮಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಹೆಗ್ಗಳಿಕೆ ಮಿಶ್ರಾ ಬೆನ್ನಿಗಿದೆ. ಇನ್ನು ವೇಗದ ವಿಭಾಗದಲ್ಲಿ ಅವೇಶ್ ಖಾನ್ ತಂಡ ಸೇರಿಕೊಂಡಿದ್ದಾರೆ. ಇತ್ತ ಕಾಗಿಸೋ ರಬಾಡಾ ದಾಳಿಗೆ ಚೆನ್ನೈ ರನ್ ಗಳಿಸುವುದು ಕಠಿಣ ಸವಲಾಗಲಿದೆ.