ದುಬೈ(ಸೆ.24): 13ನೇ ಆವೃತ್ತಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2ನೇ ಪಂದ್ಯದಲ್ಲಿ ಮುಗ್ಗರಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಅಬ್ಬರದ ಮುಂದೆ RCB ಹೀನಾ ಸೋಲು ಕಂಡಿದೆ.  ಕೆಎಲ್ ರಾಹುಲ್ ಏಕಾಂಗಿಯಾಗಿ ಹೋರಾಟ ನೀಡಿ ದಾಖಲೆಯ 132 ರನ್ ಸಿಡಿಸಿದ್ದರು. RCB ತಂಡದ 10 ಬ್ಯಾಟ್ಸ್‌ಮನ್‌ಗಳು ಸೇರಿ 109 ರನ್ ಸಿಡಿಸಿದ್ದಾರೆ.

206 ರನ್ ಟಾರ್ಗೆಟ್ ನೋಡಿದ RCB ಬೆಚ್ಚಿ ಬಿದ್ದಿತ್ತು. ಕಾರಣ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ, ಪಂಜಾಬ್ ತಂಡವನ್ನು 160 ರಿಂದ 170 ರನ್ ಒಳಗೆ ಕಟ್ಟಿಹಾಕಿದರೆ ಗೆಲುವು ಸುಲಭವಾಗಲಿದೆ ಎಂದಿದ್ದರು. ಆದರೆ ಕೊಹ್ಲಿ ಲೆಕ್ಕಾಚಾರವನ್ನು ಕೆಎಲ್ ರಾಹುಲ್ ಉಲ್ಟಾ ಮಾಡಿದ್ದರು. ಇಷ್ಟಾದರೂ RCB ಬ್ಯಾಟಿಂಗ್ ಪಡೆಗೆ 207 ರನ್ ಅಸಾಧ್ಯವೇನು ಆಗಿರಲಿಲ್ಲ. 

ಸ್ಪಿನ್ ಮೋಡಿ ಮೂಲಕ RCB ಬ್ಯಾಟ್ಸ್‌ಮನ್‌ಗಳನ್ನು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶವೇ ನೀಡಲಿಲ್ಲ. ಒಂದೆಡೆಯಿಂದ ರವಿ ಬಿಶ್ನೋಯಿ ಮತ್ತೊಂದೆಡೆಯಿಂದ ಮುರುಗನ್ ಅಶ್ವಿನ್ RCB ಮೇಲೆ ಸವಾರಿ ಮಾಡಿದರು. ದೇವದತ್ ಪಡಿಕ್ಕಲ್, ಜೊಶುವಾ ಪಿಲಿಪ್, ವಿರಾಟ್ ಕೊಹ್ಲಿ, ಆ್ಯರೋನ್ ಫಿಂಚ್ ಅಬ್ಬರಿಸಲೇ ಇಲ್ಲ. 

ಎಬಿ ಡಿವಿಲಿಯರ್ಸ್ 28 ಹಾಗೂ ವಾಶಿಂಗ್ಟನ್ ಸುಂದರ್ 30 ರನ್ ಹಾಗೂ ಶಿವಂ ದುಬೆ 12 ರನ್ ಸಿಡಿಸಿದರು. ಇನ್ನುಳಿದವರಿಗೆ ರನ್ ಹರಿದು ಬರಲಿಲ್ಲ. ಕಷ್ಟಪಟ್ಟು RCB 100 ಗಡಿ ದಾಟಿತು. 17ನೇ ಓವರ್‌ನಲ್ಲಿ 109 ರನ್‌ಗಳಿಗೆ RCB ಆಲೌಟ್ ಆಯಿತು. ಪಂಜಾಬ್ 97 ರನ್ ಭರ್ಜರಿ ಗೆಲುವು ದಾಖಲಿಸಿತು ಮರುಗನ್ ಅಶ್ವಿನ್ ಹಾಗೂ ರವಿ ಬಿಶ್ನೋಯಿ ತಲಾ 3 ವಿಕೆಟ್ ಕಬಳಿಸಿದರೆ, ಶೆಲ್ಡಾನ್ ಕಾಟ್ರೆಲ್ 2, ಮೊಹಮ್ಮದ್ ಶಮಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಕಬಳಿಸಿದರು.