ಐಪಿಎಲ್ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆ. ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಹೋರಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ನೆಗ ಬೀರಿದೆ. 

ದುಬೈ(ಅ.22): ಪ್ಲೇ ಆಫ್ ಕನಸು ಜೀವಂತವಾಗಿರಬೇಕಾದರೆ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲ್ಲಲೇಬೇಕಿತ್ತು. ಹೀಗಾಗಿ ಉಭಯ ತಂಡಗಳು ಕಠಿಣ ಹೋರಾಟ ನೀಡಿತು. ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮಣಿಸಿದ ಹೈದರಾಬಾದ್ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಇತ್ತ ರಾಜಸ್ಥಾನ ರಾಯಲ್ಸ್ ತಂಡ ಇನ್ನು ಸೋಲಿನ ಅಂತರ ತಗ್ಗಿಸಲು ಹೋರಾಟ ಮಾಡಬೇಕಿದೆ.

ಗೆಲುವಿಗೆ 155 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ನಾಯಕ ಡೇವಿಡ್ ವಾರ್ನರ್ ಕೇವಲ 4 ರನ್ ಸಿಡಿಸಿ ಔಟಾದರು. ಮತ್ತೋರ್ವ ಆರಂಭಿಕ ಜಾನಿ ಬೈರ್‌ಸ್ಟೋ 10 ರನ್ ಸಿಡಿಸಿ ನಿರ್ಗಮಿಸಿದರು. 16 ರನ್‌ಗಳಿಗೆ ಹೈದರಾಬಾದ್ 2 ವಿಕೆಟ್ ಕಳೆದಕೊಂಡಿತು.

ಆರಂಭಿಕ ಮೇಲುಗೈ ಸಾಧಿಸಿದ ರಾಜಸ್ಥಾನ ರಾಯಲ್ಸ್ ತಂಡದ ಲೆಕ್ಕಾಚಾರವನ್ನು ಮನೀಶ್ ಪಾಂಡೆ ಉಲ್ಟಾ ಮಾಡಿದರು. ದಿಟ್ಟ ಹೋರಾಟ ನೀಡಿದ ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿದರು. ಇತ್ತ ಪಾಂಡೆಗೆ ವಿಜಯ್ ಶಂಕರ್ ಉತ್ತಮ ಸಾಥ್ ನೀಡಿದರು. ಪಾಂಡೆ ಹಾಗೂ ಶಂಕರ್ ಜೊತೆಯಾಟದಿಂದ ಹೈದರಾಬಾದ್ ಗೆಲುವಿಗೆ ಅಂತಿಮ 24 ಎಸೆತದಲ್ಲಿ 24 ರನ್ ಅವಶ್ಯಕತೆ ಇತ್ತು. 

ಮನೀಶ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಹೈದರಾಬಾದ್ ತಂಡ 18.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಾಂಡೆ ಅಜೇಯ 83 ರನ್ ಸಿಡಿಸಿದರೆ, ಶಂಕರ್ ಅಜೇಯ 52 ರನ್ ಸಿಡಿಸಿದರು. 8 ವಿಕೆಟ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇಷ್ಟೇ ಅಲ್ಲ ಮಹತ್ವದ ಪ್ಲೇ ಆಫ್ ರೇಸ್‌ನಲ್ಲಿ ಹೈದರಾಬಾದ್ ಕೂಡ ಕಾಣಿಸಿಕೊಂಡಿತು.