ಶಾರ್ಜಾ(ಅ.31): ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ. ಕೊಹ್ಲಿ ಪಡೆ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಹೈದರಾಬಾದ್ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ಆದರೆ ಇತ್ತ ಆರ್‌ಸಿಬಿ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಆರ್‌ಸಿಬಿ ಬ್ಯಾಟ್ಸ್‌ಮನ್ ವೈಫಲ್ಯದ ಕಾರಣ ಹೈದರಾಬಾದ್ ತಂಡಕ್ಕೆ ಕೇವಲ 121 ರನ್ ಟಾರ್ಗೆಟ್ ಸಿಕ್ಕಿತ್ತು. ಸುಲಭ ಗುರಿ ಪಡೆದ ಹೈದರಾಬಾದ್ ತಂಡ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಡೇವಿಡ್ ವಾರ್ನರ್ 8 ರನ್ ಸಿಡಿಸಿ ನಿರ್ಗಮಿಸಿದರು.

ಆದರೆ ವೃದ್ಧಿಮಾನ ಸಾಹ ಹಾಗೂ ಮನೀಶ್ ಪಾಂಡೆ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು. ಪಾಂಡೆ ಹಾಗೂ ಸಾಹ 2ನೇ ವಿಕೆಟ್‌ಗೆ 50 ರನ್ ಜೊತೆಯಾಟ ನೀಡಿದರು. ಮನೀಶ್ ಪಾಂಡೆ 19 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು.

ವೃದ್ಧಿಮಾನ ಸಾಹ 39 ರನ್ ಸಿಡಿಸಿ ಔಟಾದರು. ಕೇನ್ ವಿಲಿಯಮ್ಸನ್ ಹಾಗೂ ಅಭಿಶೇಕ್ ಶರ್ಮಾ ಅಬ್ಬರಿಸಲಿಲ್ಲ. ಆದರೆ ಜೇಸನ್ ಹೋಲ್ಡರ್ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಆತಂಕವಿಲ್ಲದೆ ಓವರ್‌ಗಳಲ್ಲಿ ಗುರಿ ಸಾಧಿಸಿತು. ವಿಕೆಟ್ ಗೆಲುವು ಸಾಧಿಸಿದ ಹೈದರಾಬಾದ್ ತಂಡ ಪ್ಲೇ ಆಫ್ ಅವಕಾಶವನ್ನು ಜೀವಂತವಾಗಿರಿಸಿದೆ.

ಹೈದರಾಬಾದ್ ವಿರುದ್ಧ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.