IPL 2020: ಮುಂಬೈ ಮಣಿಸಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH, ಕೆಕೆಆರ್ ಔಟ್!
13ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವು ಕಂಡಿದೆ. ಈ ಮೂಲಕ ಪ್ಲೇ ಆಫ್ ಸ್ಥಾನಕ್ಕೆ ಎಂಟ್ರಿಕೊಟ್ಟಿದೆ. ಆದರೆ ಮುಂಬೈ ಗೆಲವಿಗೆ ಪ್ರಾರ್ಥಿಸಿದ್ದ ಕೆಕೆಆರ್, ಟೂರ್ನಿಯಿಂದ ಹೊರಬಿದ್ದಿದೆ.
ಶಾರ್ಜಾ(ನ.03): ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಉತ್ತಮ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿರುವ ಹೈದರಾಬಾದ್, ಪ್ಲೇ ಆಫ್ ಸುತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಗೆಲುವುಗೆ 150 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್, ಹೈದರಾಬಾದ್ ವಿರುದ್ಧ ದುರ್ಬಲವಾಗಿ ಕಾಣಿಸಿಕೊಂಡಿತು. ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹ ಬ್ಯಾಟಿಂಗ್, ಮುಂಬೈ ತಂಡಕ್ಕೆ ತಲೆನೋವಾಯಿತು.
ಡೇವಿಡ್ ವಾರ್ನರ್ ಹಾಗೂ ಸಾಹ ಅರ್ಧಶತಕ ಸಿಡಿಸಿ ಮಿಂಚಿದರು. ಇಷ್ಟೇ ಅಲ್ಲ ಇವರಿಬ್ಬರ ಬ್ಯಾಟಿಂಗ್‌ನಿಂದ ಹೈದರಾಬಾದ್ ಗೆಲುವಿನ ಹಾದಿ ಸುಗಮಗೊಂಡಿತು. ಮುಂಬೈ ತಂಡದ ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ ನೀಡಿದ ಕಾರಣ ಮುಂಬೈ ಪರಿಣಾಕಾರಿ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಾರ್ನರ್ ಅಜೇಯ 85 ರನ್ ಸಿಡಿಸಿದರೆ, ಸಾಹ ಅಜೇಯ 58 ರನ್ ಸಿಡಿಸಿದರು.
ಸನ್‌ರೈಸರ್ಸ್ ಹೈದರಾಬಾದ್ 17.1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 14 ಅಂಕ ಹಾಗೂ ಅತ್ಯುತ್ತಮ ರನ್‌ರೇಟ್‌ನೊಂದಿಗೆ 3ನೇ ಸ್ಥಾನಕ್ಕೇರಿದೆ. ನವೆಂಬರ್ 6 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಎದುರಿಸಲಿದೆ.