ದುಬೈ(ಅ.24): ಪ್ರತಿ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ದಾಳಿಗೆ ಕುಸಿದ ಪಂಜಾಬ್ 7 ವಿಕೆಟ್ ನಷ್ಟಕ್ಕೆ 126 ರನ್ ಸಿಡಿಸಿದೆ.

ಎಂದಿನ ಜೊತೆಗಾರ ಮಯಾಂಕ್ ಅಗರ್ವಾಲ್ ಇಲ್ಲದೆ ನಾಯಕ ಕೆಎಲ್ ರಾಹುಲ್‌ಗೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಮನ್ದೀಪ್ ಸಿಂಗ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ 37 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಮನ್ದೀಪ್ ಸಿಂಗ್ 17 ರನ್ ಸಿಡಿಸಿ ಔಟಾದರು.

ತಂಡದಲ್ಲಿ ಹೊಸ ಚೈತನ್ಯತಂದಿದ್ದ ಕ್ರಿಸ್ ಗೇಲ್ ಕೇವಲ 20 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ರಾಹುಲ್ 27 ರನ್ ಸಿಡಿಸಿ ನಿರ್ಗಮಿಸಿದರು. 66 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ತೀವ್ರ ಸಂಕಷ್ಟ ಎದುರಿಸಿತು. ನಿಕೊಲಸ್ ಪೂರನ್ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದೀಪಕ್ ಹೂಡ ಆಸರೆಯಾಗಲಿಲ್ಲ.

ನಿಕೊಲಸ್ ಪೂರನ್ ಹೋರಾಟ ಮುಂದುವರಿಸಿದರು. ಆದರೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ನಿಕೋಲಸ್ ಪೂರನ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ 7ವಿಕೆಟ್ ನಷ್ಟಕ್ಕೆ 126 ರನ್ ಸಿಡಿಸಿತು.