ಶಾರ್ಜಾ(ಅ.15): ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಹೋರಾಟಕ್ಕೆ ಆರ್‌ಸಿಬಿ ಹಾಗೂ ಪಂಜಾಬ್ ರೆಡಿಯಾಗಿದೆ. ಈ ಗೆಲುವು ಕೊಹ್ಲಿ ಸೈನ್ಯವನ್ನು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕೊಂಡೊಯ್ದರೆ, ಇತ್ತ ಪಂಜಾಬ್‍ಗೆ ಈ ಗೆಲುವು ಪ್ಲೇ ಆಫ್ ಆಸೆ ಜೀವಂತವಾಗಿರಿಸಲಿದೆ. ಹೀಗಾಗಿ ಇಂದಿನ ಹೋರಾಟ ಮಹತ್ವ ಪಡೆದಿದೆ. ಟಾಸ್ ಗೆದ್ದಿರುವ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

ಬೆಂಗಳೂರು ತಂಡದಲಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಆದರೆ ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮನ್ದೀಪ್ ಸಿಂಗ್, ಪ್ರಭಾಸಿಮ್ರನ್ ಹಾಗೂ ಮುಜೀಬ್ ಯುಆರ್ ರಹಮಾನ್ ತಂಡದಿಂದ ಹೊರಬಿದ್ದಿದ್ದಾರೆ.  ಐಪಿಎಲ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸುದೀರ್ಘ ದಿನಗಳ ಬಳಿಕ ಅಖಾಡಕ್ಕೆ ಇಳಿಯುತ್ತಿದ್ದಾರೆ. ಆರೋಗ್ಯಸಮಸ್ಯೆಯಿಂದ ಹೊರಗುಳಿದಿದ್ದ ಗೇಲ್ ಇದೀಗ ತಂಡ ಸೇರಿಕೊಂಡಿದ್ದಾರೆ.  ಇನ್ನು ದೀಪಕ್ ಹೂಡ ಹಾಗೂ ಮುರಗನ್ ಅಶ್ವಿನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ. 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಪಂದ್ಯದಲ್ಲಿ 5 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ 7 ಪಂದ್ಯದಲ್ಲಿ 6ರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.