ಶಾರ್ಜಾ(ಸೆ.22): ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯಭೇರಿ ಬಾರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಿಗಲಿಲ್ಲ.  ಬರೋಬ್ಬರಿ 217 ರನ್ ಟಾರ್ಗೆಟ್  ನೋಡಿದ CSK ತಂಡಕ್ಕೆ ರನ್ ಚೇಸ್ ಮತ್ತಷ್ಟು ಸವಾಲಾಯಿತು.  ಬೃಹತ್ ಟಾರ್ಗೆಟ್ ನೀಡಿದ ಬಳಿಕ ಬೌಲಿಂಗ್‌ನಲ್ಲೂ ರಾಜಸ್ಥಾನ  ಮಿಂಚಿನ ಪ್ರದರ್ಶನ ನೀಡಿತು.  

ಶೇನ್ ವ್ಯಾಟ್ಸ್‌ನ್ ಹಾಗೂ ಮುರಳಿ ವಿಜಯ್ ಡೀಸೆಂಟ್ ಆರಂಭ ನೀಡಿದರು. ಆದರೆ ಸ್ಟ್ರೈಕ್ ರೇಟ್ ರನ್ ಚೇಸ್‌ಗೆ ಸರಿಯಾಗಿ ಇರಲಿಲ್ಲ. ಶೇನ್ ವ್ಯಾಟ್ಸನ್ 33 ರನ್ ಸಿಡಿಸಿ ಔಟಾದರೆ, ಮುರಳಿ ವಿಜಯ್ 21 ರನ್ ಸಿಡಿಸಿ ನಿರ್ಗಮಿಸಿದರು. ಫಾಪ್ ಡುಪ್ಲೆಸಿಸ್ ಹಾಗೂ ಸ್ಯಾಮ್ ಕುರನ್ ಜೊತೆಯಾಟದ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಯಿತು. ಕುರನ್ 6 ಎಸೆತದಲ್ಲಿ 17 ರನ್ ಸಿಡಿಸಿ ರನ್ ವೇಗ ಹೆಚ್ಚಿದರು. 

ಇತ್ತ ಡುಪ್ಲೆಸಿಸ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ರುತುರಾಜ್ ಗಾಯಕ್ವಾಡ್ ಅಬ್ಬರಿಸಲಿಲ್ಲ. ಕೇದಾರ್ ಜಾದವ್ 22 ರನ್ ಸಿಡಿಸಿ ನಿರ್ಗಮಿಸಿದರು. ಫಾಫ್ ಡುಪ್ಲೆಸಿಸ್ ಅಬ್ಬರ ಆರಂಭಿಸಿದಾಗ,  ನಾಯಕ ಎಂ.ಎಸ್.ಧೋನಿ ಸಾಥ್ ನೀಡಿದರು.  ಬೌಂಡರಿ ಸಿಕ್ಸರ್ ಮೂಲಕ ಫಾಫ್ ಡುಪ್ಲೆಸಿಸ್ 37 ಎಸೆತದಲ್ಲಿ 72 ರನ್ ಸಿಡಿಸಿದರು. ಆದರೆ ಬಿರುಸಿನ ಹೊಡೆತಕ್ಕೆ ಮುಂದಾಗಿ ಪೇವಿಲಿಯನ್ ಸೇರಿಕೊಂಡರು. 

ಚೆನ್ನೈ ಗೆಲುವಿಗೆ ಅಂತಿಮ 6 ಎಸೆತದಲ್ಲಿ 38 ರನ್ ಅವಶ್ಯಕತೆ ಇತ್ತು. ಧೋನಿ ಸಿಕ್ಕ ಎಸೆತದಲ್ಲಿ ಭರ್ಜರಿ ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ಕಾಲ ಮಿಂಚಿಹೋಗಿತ್ತು. ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಧೋನಿ ಸೋಲಿನ ಅಂತರ ಕಡಿಮೆ ಮಾಡಿದರು. ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಸಿಡಿಸಿತು. ಧೋನಿ 17 ಎಸೆತದಲ್ಲಿ 29 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 16 ರನ್ ಸೋಲು ಕಂಡಿತು.