ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ವೈಫಲ್ಯದಿಂದ ಕೇವಲ 126 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಸುಲಭವಾಗಿ ಗುರಿ ತಲುಪಿದೆ. ಇದೀಗ ಈ ಗೆಲುವಿನ ಮೂಲಕ ರಾಜಸ್ಥಾನದ ಪ್ಲೇ ಆಫ್ ರೇಸ್ ವೇಗ ಪಡೆದುಕೊಂಡಿದೆ. ಆದರೆ ಸಿಎಸ್‌ಕೆ ಕತೆ ಏನು? ಇಲ್ಲಿದೆ ವಿವರ
ಅಬು ಧಾಬಿ(ಅ.19) : 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ ಆಫ್ ಹಾದಿ ಬಹುತೇಕ ಕಮರಿ ಹೋಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಮುಗ್ಗರಿಸಿದೆ. ಚೆನ್ನೈ ತಂಡವನ್ನು 125 ರನ್‌ಗಳಿಗೆ ಕಟ್ಟಿಹಾಕಿದ ರಾಜಸ್ಥಾನ, ಜೋಸ್ ಬಟ್ಲರ್ ಹೋರಾಟದಿಂದ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ಗೆಲುವಿಗೆ 126 ರನ್ ಸುಲಭ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಆರಂಭ ಪಡೆಯಿತು. ಆದರೆ ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಜೊತೆಯಾಟದ ಆರಂಭ ಕೇವಲ 19 ರನ್‌ಗಳಲ್ಲಿ ಅಂತ್ಯವಾಯಿತು. ಸ್ಟೋಕ್ಸ್ 11 ಎಸೆತದಲ್ಲಿ 19 ರನ್ ಸಿಡಿಸಿ ಔಟಾದರು.
"
ಕಳೆದ ಪಂದ್ಯದಲ್ಲಿ ಅಬ್ಬರಿಸಿದ ರಾಬಿನ್ ಉತ್ತಪ್ಪ ಕೇವಲ 4 ರನ್ ಸಿಡಿಸಿ ಔಟಾದರು. ಇನ್ನು ಫಾರ್ಮ್ ಸಮಸ್ಯೆ ಅನುಭವಿಸುತ್ತಿರುವ ಸಂಜು ಸ್ಯಾಮ್ಸನ್ ಡಕೌಟ್ ಆದರು. 28 ರನ್‌ಗಳಿಗೆ ರಾಜಸ್ಥಾನದ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಜೋಸ್ ಬಟ್ಲರ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಜೊತೆಯಾಟ ರಾಜಸ್ಥಾನ ರಾಯಲ್ಸ್ ತಂಡದ ಆತಂಕ ದೂರ ಮಾಡಿತು. ಜೋಸ್ ಬಟ್ಲರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇತ್ತ ಸ್ಮಿತ್ ರನ್‌ಗಳಿಸಲು ಪರದಾಡಿದರೂ, ಬಟ್ಲರ್‌ಗೆ ಸಾಥ್ ನೀಡಿದರು.
ಜೋಸ್ ಬಟ್ಲರ್ ಅಜೇಯ 70 ರನ್ ಸಿಡಿಸಿದರೆ, ಸ್ಟೀವ್ ಸ್ಮಿತ್ ಅಜೇಯ 28 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ 17.3 ಓವರ್‌ಗಳಲ್ಲಿ ಗೆಲುವು ದಾಖಲಿಸಿತು. 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದ ರಾಜಸ್ಥಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ.
