ಅಬು ಧಾಬಿ(ಅ.16): ಮುಂಬೈ ಇಂಡಿಯನ್ಸ್ ಅಬ್ಬರದ ಮುಂದೆ ಕೋಲ್ಕತಾ ನೈಟ್ ರೈಡರ್ಸ್ ಸೋಲಿಗೆ ಶರಣಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಕೆಕೆಕಆರ್ ಹಲವು ಬದಲಾವಣೆ ಬಳಿಕವೂ ಸೋಲಿಗೆ ಗುರಿಯಾಗಿದೆ.

149 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಸ್ಫೋಟಕ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟ ಕೆಕೆಆರ್ ತಂಡಕ್ಕೆ ಇನ್ನಿಲ್ಲದ ಚಿಂತೆ ತಂದಿಟ್ಟಿತು. ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ನೀಡಲು ಕೆಕೆಆರ್ ಬೌಲಿಂಗ್ ಸತತ ಪ್ರಯತ್ನ ಮಾಡಿತು.

ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಹಾಗಾ ಡಿಕಾಕ್ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿ ಸುಗಮಗೊಳಿಸಿದರು. ಆದರೆ ರೋಹಿತ್ ಶರ್ಮಾ 35 ರನ್ ಸಿಡಿಸಿ ಔಟಾದರು. ಈ ಮೂಲಕ ಆರಂಭಿಕ 94 ರನ್ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. 

ಸೂರ್ಯಕುಮಾರ್ ಯಾದವ್ 10 ರನ್ ಸಿಡಿಸಿ ಔಟಾದರು. ಆದರೆ ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ಡಿಕಾಕ್ ಬ್ಯಾಟಿಂಗ್ ಮುಂದುವರಿಸಿದರು. ಇತ್ತ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡಿಕಾಕ್ ಅಜೇಯ 78 ರನ್ ಹಾಗೂ ಪಾಂಡ್ಯ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 16.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಕೆಕೆಆರ್ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಮತ್ತೆ ಡೆಲ್ಲಿ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂಬೈ ವಿರುದ್ಧ ಮುಗ್ಗರಿಸಿದ ಕೆಕೆಆರ್ ತಂಡದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆಕೆಆರ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.