ಅಬು ಧಾಬಿ(ಅ.28): ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ನಡೆಸಿದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಮುಂಬೈ, ಇದೀಗ 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ  ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. 

ಗೆಲುವಿಗೆ 165 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಡಿಸೆಂಟ್ ಆರಂಭ ಪಡೆಯಿತು. ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಶನ್ ಮೊದಲ ವಿಕೆಟ್‌ಗೆ 37 ರನ್ ಜೊತೆಯಾಟ ನೀಡಿದರು. ಕ್ವಿಂಟನ್ ಡಿಕಾಕ್ 18 ರನ್ ಸಿಡಿಸಿ ಔಟಾದರು. ಇನ್ನು ಇಶಾನ್ ಕಿಶನ್ 25 ರನ್ ಕಾಣಿಕೆ ನೀಡಿದರು.

2 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಆಸರೆಯಾದರು. ಆದರೆ ಸೌರಬ್ ತಿವಾರಿ 5 ಹಾಗೂ ಕ್ರುನಾಲ್ ಪಾಂಡ್ಯ 10 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು. ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್, ಆರ್‌ಸಿಬಿ ತಲೆನೋವು ಹೆಚ್ಚಿಸಿದರು.

ಹಾರ್ದಿಕ್ ಪಾಂಡ್ಯ 14 ರನ್ ಕಾಣಿಕೆ ನೀಡಿದರು. ನಾಯಕ ಕೀರನ್ ಪೋಲಾರ್ಡ್ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡಕ್ಕೆ 19.1 ಓವರ‌ಗಳಲ್ಲಿ 5 ವಿಕೆಟ್ ಗೆಲುವು ತಂದುಕೊಟ್ಟರು. ಸೂರ್ಯಕುಮಾರ್ ಯಾದವ್ ಅಜೇಯ 79 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ 16 ಅಂಕ ಸಂಪಾದಿಸಿರುವ ಮುಂಬೈ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಗೊಂಡಿದೆ.