ದುಬೈ(ಅ.18): ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಟೈ ಆಗಿದೆ.

ಗೆಲುವಿಗೆ 177ರನ್ ಟಾರ್ಗೆಟ್ ಪೆಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಎಂದಿನ ಆರಂಭ ಸಿಗಲಿಲ್ಲ. ಈ ಬಾರಿ ಮಯಾಂಕ್ ಅಗರ್ವಾಲ್ 11 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನಾಯಕ ಕೆಎಲ್ ರಾಹುಲ್ ಹಾಗೂ ಕ್ರಿಸ್ ಜೊತೆಯಾಟದಿಂದ ಚೇತರಿಸಿಕೊಂಡಿತು. 

ಕ್ರಿಸ್ ಗೇಲ್ 24 ರನ್ ಸಿಡಿಸಿ ಔಟಾದರು. ನಿಕೊಲಸ್ ಪೂರನ್ ಜೊತೆ ಹೋರಾಟ ಮುಂದುವರಿಸಿದ ರಾಹುಲ್, ಮುಂಬೈ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. ಇವರಿಬ್ಬರ ಜೊತೆಯಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಚೇತರಿಸಿಕೊಂಡಿತು.  ಪೂರನ್ 24 ರನ್ ಸಿಡಿಸಿ ಔಟಾದರು.

ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಲಿಲ್ಲ. ಸತತ 2 ವಿಕೆಟ್ ಕಳೆದುಕೊಂಡ ಪಂಜಾಬ್ ತಂಡದಲ್ಲಿ ಆತಂಕ ಮನೆ ಮಾಡಿತು. ಆದರೆ ಕೆಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಹುಲ್‌ಗೆ ದೀಪಕ್ ಹೂಡ ಸಾಥ್ ನೀಡಿದರು.

51 ಎಸೆತದಲ್ಲಿ 77 ರನ್ ಸಿಡಿಸಿದ ರಾಹುಲ್ ವಿಕೆಟ್ ಪತನದೊಂದಿಗೆ ಪಂಜಾಬ್ ಮತ್ತೆ ಅಂತಿಮ ಹಂತದಲ್ಲಿ ವಿಕೆಟ್ ಕೈಚೆಲ್ಲೋ ಚಾಳಿ ಮುಂದವರಿಸಿತು. ಪಂಜಾಬ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು. ದೀಪಕ್ ಹೂಡ ಹೋರಾಟದಿಂದ ಪಂಜಾಬ್‌ಗೆ ಅಂತಿಮ 6 ಎಸೆತದಲ್ಲಿ 9 ರನ್ ಬೇಕಿತ್ತು.  ದೀಪಕ್ ಹೂಡ ಬೌಂಡರಿ ಸಿಡಿಸಿದರು. ಅಂತಿಮ 1 ಎಸೆತದಲ್ಲಿ 2 ರನ್ ಬೇಕಿದ್ದಾಗ  2ನೇ ಪೂರೈಸುವ ವೇಳೆ ಕ್ರಿಸ್ ಜೋರ್ಡಾನ್ ರನೌಟ್‌ಗೆ ಬಲಿಯಾದರು. ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಇದೀಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಬೇಕಿದೆ.