ಶಾರ್ಜಾದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 209 ರನ್‌ಗಳ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಶಾರ್ಜಾ(ಅ.04): ನಿರೀಕ್ಷೆಯಂತೆಯೇ ಶಾರ್ಜಾ ಮೈದಾನದಲ್ಲಿ ರನ್ ಮಳೆ ಸುರಿದಿದೆ. ಕ್ವಿಂಟನ್ ಡಿಕಾಕ್ ಸ್ಫೋಟಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿದ್ದು, ಹೈದರಾಬಾದ್ ತಂಡಕ್ಕೆ ಕಠಿಣ ಗುರಿ ನೀಡಿದೆ.
ಇಲ್ಲಿನ ಮೈದಾನದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ ಮೊದಲ ಓವರ್‌ನಲ್ಲೇ ಸಂದೀಪ್ ಶರ್ಮಾ ನಾಯಕ ರೋಹಿತ್ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಎರಡನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಕ್ವಿಂಟನ್ ಡಿಕಾಕ್ 42 ರನ್‌ಗಳ ಜತೆಯಾಟವಾಡಿದರು. ಉತ್ತಮ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ ಸೂರ್ಯಕುಮಾರ್ ಯಾದವ್(27) ಕೆಟ್ಟ ಹೊಡೆತಕ್ಕೆ ಕೈಹಾಕಿ ಸಿದ್ಧಾರ್ಥ್ ಕೌಲ್‌ಗೆ ವಿಕೆಟ್ ಒಪ್ಪಿಸಿದರು.
ಡಿಕಾಕ್-ಕಿಶನ್ ಅಬ್ಬರ: ಮೂರನೇ ವಿಕೆಟ್‌ಗೆ ಜತೆಯಾದ ಡಿಕಾಕ್ ಹಾಗೂ ಇಶಾನ್ ಕಿಶನ್ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ 78 ರನ್‌ಗಳ ಜತೆಯಾವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆರಂಭಿಕ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ್ದ ಡಿಕಾಕ್ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದರು. 39 ಎಸೆತಗಳ ಎದುರಿಸಿದ ಡಿಕಾಕ್ ತಲಾ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನೊಂದಿಗೆ 67 ರನ್ ಬಾರಿಸಿದರು. ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಕಿಶನ್ 23 ಎಸೆತಗಳಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಮತ್ತೆ ಅಬ್ಬರಿಸಿದ ಪೊಲ್ಲಾರ್ಡ್-ಪಾಂಡ್ಯ ಜೋಡಿ: 15ನೇ ಓವರ್‌ಗೆ ಜತೆಯಾದ ಕಿರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಸ್ಫೋಟಕ ಜತೆಯಾಟ ನಿಭಾಯಿಸಿದರು. ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನೊಂದಿಗೆ 28 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಪೊಲ್ಲಾರ್ಡ್ 13 ಎಸೆತಗಳಲ್ಲಿ 25 ರನ್ ಬಾರಿಸಿದರೆ, ಕೃನಾಲ್ ಪಾಂಡ್ಯ ಕೊನೆಯ 4 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 20 ರನ್ ಬಾರಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು
