ಅಬು ಧಾಬಿ(ಅ.16): ಹೊಸ ನಾಯಕ, ತಂಡದಲ್ಲೂ 2 ಬದಲಾವಣೆ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿದಿತ್ತು. ಆದರೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೆಲ್ಲಾ ಮಕಾಡೆ ಮಲಗಿದರು. ಅಂತಿಮ ಹಂತದಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ನಾಯಕ ಇಯಾನ್ ಮಾರ್ಗನ್ ಅಬ್ಬರಿಸೋ ಮೂಲಕ ಕೆಕೆಆರ್ 148 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕೆಕೆಆರ್ ಆರಂಭದಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಕಳೆದುಕೊಂಡಿತು. ತ್ರಿಪಾಠಿ 7 ರನ್ ಸಿಡಿಸಿ ಔಟಾದರು. ನಿತೀಶ್ ರಾಣ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ಮಾಜಿ ನಾಯಕ ದಿನೇಶ್ ಕಾರ್ತಿಕ್, ನಾಯಕತ್ವ ಜವಾಬ್ದಾರಿಯಿಂದ ಮುಕ್ತರಾದರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲಿಲ್ಲ. ಕಾರ್ತಿಕ್ ಕೇವಲ 4 ರನ್ ಸಿಡಿಸಿ ಔಟಾದರು.

ಆ್ಯಂಡ್ರೆ ರಸೆಲ್ 12 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನೂತನ ನಾಯಕ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ದಿಟ್ಟ ಹೋರಾಟ ನೀಡಿದರು. ಅಬ್ಬರಿಸಿದ ಕಮಿನ್ಸ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಮಾರ್ಗನ್ ಉತ್ತಮ ಸಾಥ್ ನೀಡಿದರು. ಪ್ಯಾಟ್ ಕಮಿನ್ಸ್ ಅಜೇಯ 53 ಹಾಗೂ ಇಯಾನ್ ಮಾರ್ಗನ್ ಅಜೇಯ 39 ರನ್ ಸಿಡಿಸಿದರು. 

ಮಾರ್ಗನ್ ಹಾಗೂ ಕಮಿನ್ಸ್ ಹೋರಾಟದಿಂದ ಕೆಕೆಆರ್ 5 ವಿಕೆಟ್ ನಷ್ಟಕ್ಕೆ 148 ರನ್ ಸಿಡಿಸಿತು. ಮುಂಬೈ ಪರ ರಾಹುಲ್ ಚಹಾರ್ 2 ವಿಕೆಟ್ ಕಬಳಿಸಿ ಮಿಂಚಿದರು.