ಅಬುಧಾಬಿ(ಅ.26): ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮಂಡಿಯೂರಿ Black Lives Matter ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ Black Lives Matter ಚಳುವಳಿಗೆ ಬೆಂಬಲ ಸೂಚಿಸಿದ ಮೊದಲ ಆಟಗಾರ ಎನ್ನುವ ವಿಶೇಷ ಗೌರವಕ್ಕೆ ಹಾರ್ದಿಕ್ ಪಾಂಡ್ಯ ಭಾಜನರಾಗಿದ್ದಾರೆ.

ಅಮೆರಿಕದಲ್ಲಿ ಕೆಲವು ತಿಂಗಳುಗಳ ಹಿಂದಷ್ಟೇ ಕಪ್ಪು ವರ್ಣದ ವ್ಯಕ್ತಿಯಾದ ಜಾರ್ಜ್ ಫ್ಲಾಯ್ಡ್ ಎನ್ನುವ ವ್ಯಕ್ತಿಯನ್ನು ಅಲ್ಲಿನ ಬಿಳಿಯ ಪೊಲೀಸ್‌ವೊಬ್ಬ ನಡುರಸ್ತೆಯಲ್ಲೇ ತನ್ನ ಮೊಣಕಾಲಿನಿಂದ ಫ್ಲಾಯ್ಡ್ ಅವರ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಸಾಯಿಸಿದ್ದರು. ಕಪ್ಪು ವರ್ಣಿಯರ ಮೇಲೆ ಬಿಳಿಯದ ದೌರ್ಜನ್ಯವನ್ನು ಖಂಡಿಸಿ ಜಗತ್ತಿನಾದ್ಯಂತ ಜನಸಾಮಾನ್ಯರಿಂದ ಹಿಡಿದು ಸೆಲಿಬ್ರಿಟಿಗಳವರೆಗೆ Black Lives Matter ಅಭಿಯಾನಕ್ಕೆ ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ಬೆಂಬಲ ಸೂಚಿಸಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ರೌಂಡರ್ ಜೇಸನ್ ಹೋಲ್ಡರ್ Black Lives Matter ಅಭಿಯಾನಕ್ಕೆ ನಿರೀಕ್ಷಿತ ಬೆಂಬಲ ವ್ಯಕ್ತಪಡಿಸದೇ ಇರುವುದಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್ ಪಾಂಡ್ಯ ಬ್ಲಾಕ್ ಲೀವ್ಸ್ ಮ್ಯಾಟರ್‌ ಚಳುವಳಿಗೆ ಮಂಡಿಯೂರಿ ತಮ್ಮ ಬೆಂಬಲ ಸೂಚಿಸಿದ್ದಾರೆ.

IPL 2020: ಪ್ಲೇ ಆಫ್‌ & ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ..!

ಟ್ವೀಟ್‌ ಮೂಲಕವೂ ಹಾರ್ದಿಕ್ ಪಾಂಡ್ಯ Black Lives Matter ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಪಾಂಡ್ಯ ಅವರ ಈ ನಡೆ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವಿಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಬಾರಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ಕಳೆದುಕೊಂಡು 195 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಆಕರ್ಷಕ ಶತಕ ಹಾಗೂ ಸಂಜು ಸ್ಯಾಮ್ಸನ್ ಕೆಚ್ಚೆದೆಯ ಅರ್ಧಶತಕದ ನೆರವಿನಿಂದ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.