ಬೆಂಗಳೂರು(ಅ.11): ಕನ್ನಡಿಗ ಮನೀಶ್ ಪಾಂಡೆ ಸಮಯೋಚಿತ ಅರ್ಧಶತಕ ಹಾಗೂ ನಾಯಕ ಡೇವಿಡ್ ವಾರ್ನರ್(48) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ 4 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿದ್ದು, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. 

ಟಾಸ್ ಗೆದ್ದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಯುವ ವೇಗಿ ಕಾರ್ತಿಕ್ ತ್ಯಾಗಿ ಹೈದರಾಬಾದ್ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಬಳಿಕ ನಾಯಕ ಡೇವಿಡ್ ವಾರ್ನರ್ ಅವರನ್ನು ಕೂಡಿಕೊಂಡ ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 73 ರನ್‌ಗಳ ಜತೆಯಾಟವಾಡಿತು.

ನಾಯಕ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 48 ರನ್ ಬಾರಿಸಿ ಜೋಪ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮನೀಶ್ ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ಜಯದೇವ್ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್(22) ಹಾಗೂ ಪ್ರಿಯಂ ಗರ್ಗ್(15) ಜೋಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ರಾಜಸ್ಥಾನ ರಾಯಲ್ಸ್ ಪರ ಕಾರ್ತಿಕ್ ತ್ಯಾಗಿ, ಜೋಪ್ರಾ ಆರ್ಚರ್ ಹಾಗೂ ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು.