ಅಬುಧಾಬಿ(ನ.01): ದೀಪಕ್ ಹೂಡಾ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 6 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 48 ರನ್‌ಗಳ ಜತೆಯಾಟವಾಡಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಲುಂಗಿ ಎಂಗಿಡಿ ಬೇರ್ಪಡಿಸಿದರು. ಮಯಾಂಕ್ ಅಗರ್‌ವಾಲ್(26) ಹಾಗೂ ಕೆ ಎಲ್ ರಾಹುಲ್ ಅವರನ್ನು ಎಂಗಿಡಿ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು.

ನಡೆಯದ ಪೂರನ್, ಗೇಲ್ ಆಟ: ಮಯಾಂಕ್ ಹಾಗೂ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಚೆನ್ನೈ ಬೌಲರ್‌ಗಳು ಪಂಜಾಬ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪೂರನ್ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕ್ರಿಸ್ ಗೇಲ್ ಆಟ 12 ರನ್‌ಗಳಿಗೆ ಸೀಮಿತವಾಯಿತು. ಇನ್ನು ಮನ್ದೀಪ್ ಸಿಂಗ್(14) ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.

ಆಸರೆಯಾದ ಹೂಡಾ: ಒಂದು ಹಂತದಲ್ಲಿ 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್ ತಂಡಕ್ಕೆ ದೀಪಕ್ ಹೂಡಾ ಆಸರೆಯಾದರು. ಕೇವಲ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 62 ರನ್ ಬಾರಿಸಿ ಅಜೇಯರಾಗುಳಿದರು. ಹೂಡಾ 2015ರ ಬಳಿಕ ಇದೇ ಮೊದಲ ಬಾರಿಗೆ 50+ ರನ್ ಬಾರಿಸಲು ಯಶಸ್ವಿಯಾದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಲುಂಗಿ ಎಂಗಿಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ಇಮ್ರಾನ್ ತಾಹಿರ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.