ಪಂಜಾಬ್‌ಗೆ 5ನೇ ಸೋಲು, 3ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಹೈದರಾಬಾದ್!
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಲಿಷ್ಠವಾಗಿದ್ದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಸೋಲನ್ನೇ ಹಾಸು ಹೊದ್ದು ಮಲಗಿರುವ ಪಂಜಾಬ್ ತಂಡಕ್ಕೆ ಇದೀಗ ಹೈದರಾಬಾದ್ ವಿರುದ್ಧವೂ ಮುಗ್ಗರಿಸಿದೆ.
ದುಬೈ(ಅ.08): ಒಂದಲ್ಲ, ಎರಡಲ್ಲ ಇದು 5ನೇ ಸೋಲು. ಸ್ಫೋಟಕ ಬ್ಯಾಟಿಂಗ್, ಅಗ್ರೆಸ್ಸೀವ್ ಬೌಲಿಂಗ್, ಯುವ ನಾಯಕ, ದಿಗ್ಗಜ ಕೋಚ್ ಬಲ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕಿದ್ದರೂ ಗೆಲುವು ಮಾತ್ರ ಸಿಗುತ್ತಲೇ ಇಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಪಂಜಾಬ್ ತಂಡಕ್ಕೆ ಮುಖಭಂಗವಾಗಿದೆ.
202ರನ್ ಟಾರ್ಗೆಟ್ ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ನಿಕೊಲಸ್ ಪೂರನ್ ಏಕಾಂಗಿ ಹೋರಾಟದಿಂದ ಗೆಲುವು ಸಿಗಲಿಲ್ಲ. ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಸಿಮ್ರನ್ ಸಿಂಗ್ ಅಬ್ಬರಿಸಲಿಲ್ಲ.
ಸನ್‌ರೈಸರ್ಸ್ ದಾಳಿಗೆ ದಿಟ್ಟ ಹೋರಾಟ ನೀಡಿದ ಪೂರನ್ ತಂಡಕ್ಕೆ ಆಸರೆಯಾದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಮಂದೀಪ್ ಸಿಂಗ್ ಸೇರಿದಂತೆ ಪಂಜಾಬ್ ತಂಡದ ಯಾರೂ ಕೂಡ ಹೋರಾಟ ನೀಡಲೇ ಇಲ್ಲ. ಇತ್ತ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನಿಸಿದ ಪೂರನ್ 37 ಎಸೆತದಲ್ಲಿ 77 ರನ್ ಸಿಡಿಸಿ ಔಟಾದರು. 16.5 ಓವರ್‌ಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 132 ರನ್‌ಗಳಿಗೆ ಆಲೌಟ್ ಆಯಿತು.
ಸನ್‌ರೈಸರ್ಸ್ ಹೈದರಾಬಾದ್ 69 ರನ್ ಗೆಲುವ ದಾಖಲಿಸಿತು. ರಶೀದ್ ಖಾನ್ 3 ವಿಕೆಟ್ ಪಡೆದರೆ, ಖಲೀಲ್ ಅಹಮ್ಮದ್ ಹಾಗೂ ಟಿ ನಟರಾಜನ್ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಹೈದರಾಬಾದ್ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.