ಶಾರ್ಜಾ(ಅ.26): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 46ನೇ ಪಂದ್ಯದಲ್ಲಿಂದು ಬಲಿಷ್ಠ ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ.

ಒಂದು ಕಡೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕೆಕೆಆರ್ ತಂಡ ಇಂದು ಕೂಡಾ ಪಂಜಾಬ್ ಎದುರು ಸವಾರಿ ಮಾಡಲು ಎದುರು ನೋಡುತ್ತಿದೆ. ಸದ್ಯ 11 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 5  ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರವಡಿಸಿಕೊಳ್ಳಲು ಇಯಾನ್ ಮಾರ್ಗನ್ ಪಡೆ ಎದುರು ನೋಡುತ್ತಿದೆ.

ಅದರಲ್ಲೂ ಬಲಿಷ್ಠ ಡೆಲ್ಲಿ ಎದುರು ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಸ್ಫೋಟಕ ಅರ್ಧಶತಕ ಬಾರಿಸಿದರೆ, ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

ಧೋನಿ ಹೇಳಿದ ಮುತ್ತಿನಂಥ ಮಾತೊಂದನ್ನು ನೆನಪಿಸಿಕೊಂಡ ಮೊಹಮ್ಮದ್ ಸಿರಾಜ್..!

ಇನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 12 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಡೆತ್‌ ಓವರ್‌ನಲ್ಲಿ ಕ್ರಿಸ್ ಜೋರ್ಡನ್ ಹಾಗೂ ಆರ್ಶ್‌ದೀಪ್ ಸಿಂಗ್‌ ಮಾರಕ ದಾಳಿ ಸಂಘಟಿಸುವ ಮೂಲಕ ತಂಡದ ಬಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಬ್ಯಾಟಿಂಗ್‌ನಲ್ಲಿ ಮಯಾಂಕ್‌ ಅಗರ್‌ವಾಲ್, ಕೆ ಎಲ್ ರಾಹುಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್ ಅಬ್ಬರಿಸಿದರೆ ತಂಡ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಬಹುದಾಗಿದೆ. 

ಶಾರ್ಜಾ ಮೈದಾನ ಉಳಿದೆರಡು ಮೈದಾನಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕ ಮೈದಾನವಾಗಿದ್ದು, ಎರಡು ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿರುವುದರಿಂದ ಸಿಕ್ಸರ್‌ಗಳ ಸುರಿಮಳೆ ಸುರಿಯುವ ಸಾಧ್ಯತೆಯಿದೆ.

ಪಂದ್ಯ ಆರಂಭ: ಸಂಜೆ 7.30
ಸ್ಥಳ: ಶಾರ್ಜಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್