ಅಬುಧಾಬಿ(ಅ.18): ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ರೋಚಕ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದ್ದು ಇದೀಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿದೆ

ಕೊನೆಯ 2 ಓವರ್‌ಗಳಲ್ಲಿ ಗೆಲ್ಲಲು ಹೈದರಾಬಾದ್ ತಂಡಕ್ಕೆ 30 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ ಬೌಲಿಂಗ್ ಮಾಡಿದ ಶಿವಂ ಮಾವಿ ಕೇವಲ 12 ರನ್ ನೀಡಿ ಸಮದ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಕೊನೆಯ ಓವರ್‌ನಲ್ಲಿ ಆಂಡ್ರೆ ರಸೆಲ್ ಕೇವಲ 17 ರನ್ ನೀಡಿದ್ದರಿಂದ ಪಂದ್ಯ ಟೈ ಆಯಿತು. ರಸೆಲ್ ಬೌಲಿಂಗ್‌ನಲ್ಲಿ ವಾರ್ನರ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಆದರೆ ಕೊನೆಯ 2 ಎಸೆತಗಳಲ್ಲಿ 4 ರನ್‌ಗಳ ಅಗತ್ಯವಿತ್ತು. ಈ ವೇಳೆ ರಸೆಲ್ ಕೇವಲ 3 ರನ್ ಮಾತ್ರ ನೀಡಿದ್ದರಿಂದ ಪಂದ್ಯ ಟೈ ಆಯಿತು

ಕೋಲ್ಕತ ನೀಡಿದ್ದ 164 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್ - ಕೇನ್ ವಿಲಿಯಮ್ಸನ್‌ ಮೊದಲ ವಿಕೆಟ್‌ಗೆ 57 ರನ್‌ಗಳ ಜತೆಯಾಟವಾಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 29 ರನ್ ಬಾರಿಸಿ ಲೂಕಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿದರು.

ಶಾಕ್‌ ನೀಡಿದ ಫರ್ಗ್ಯೂಸನ್: ಒಂದು ಹಂತದಲ್ಲಿ ಅನಾಯಾಸವಾಗಿ ರನ್ ಗಳಿಸುತ್ತಿದ್ದ ಹೈದರಾಬಾದ್ ತಂಡಕ್ಕೆ ನ್ಯೂಜಿಲೆಂಡ್ ವೇಗಿ ಲೂಕಿ ಪರ್ಗ್ಯೂಸನ್ ಶಾಕ್ ನೀಡಿದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ಫರ್ಗ್ಯೂಸನ್ ಮೊದಲು ಮೂರು ಓವರ್‌ನಲ್ಲಿ ಕೇವಲ 8 ರನ್ ನೀಡಿ ವಿಲಿಯಮ್ಸನ್, ಗರ್ಗ್ ಹಾಗೂ ಮನೀಶ್ ಪಾಂಡೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನು ಕಳೆದ ಕೆಲವು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಪರದಾಡುತ್ತಿದ್ದ ಪ್ಯಾಟ್ ಕಮಿನ್ಸ್ ಕೊನೆಗೂ ವಿಜಯ್ ಶಂಕರ್ ವಿಕೆಟ್ ಪಡೆದು ನಿಟ್ಟುಸಿರು ಬಿಟ್ಟರು. ಇನ್ನು ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಡೇವಿಡ್ ವಾರ್ನರ್ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

5000 ಸಾವಿರ ರನ್ ಪೂರೈಸಿದ ಡೇವಿಡ್ ವಾರ್ನರ್: ಕೆಕೆಆರ್ ವಿರುದ್ಧ 10 ರನ್ ಪೂರೈಸುತ್ತಿದ್ದಂತೆ ಡೇವಿಡ್ ವಾರ್ನರ್ ಐಪಿಎಲ್ ಟೂರ್ನಿಯಲ್ಲಿ 5000 ರನ್ ಪೂರೈಸಿದ ಸಾಧನೆ ಮಾಡಿದರು. ಐಪಿಎಲ್‌ನಲ್ಲಿ 5 ಸಾವಿರ ರನ್ ಬಾರಿಸಿದ ಮೊದಲ ವಿದೇಶಿ ಬ್ಯಾಟ್ಸ್‌ಮನ್ ಹಾಗೆಯೇ ಒಟ್ಟಾರೆ 4ನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪಾತ್ರರಾದರು. ಈ ಮೊದಲು ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 5 ಸಾವಿರ ರನ್ ಬಾರಿಸಿದ್ದಾರೆ.

ಕೊನೆಯಲ್ಲಿ ಅಬ್ದುಲ್ ಸಮದ್ ಹಾಗೂ ನಾಯಕ ಡೇವಿಡ್ ವಾರ್ನರ್ ಹೈದರಾಬಾದ್ ತಂಡ ರನ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು. 6ನೇ ವಿಕೆಟ್‌ಗೆ ಈ ಜೋಡಿ 37 ರನ್‌ಗಳ ಜತೆಯಾಟ ನಿಭಾಯಿಸಿತಾದರೂ ತಂಡವನ್ನು ಗೆಲುವಿನ ಗೆರೆ ದಾಟಿಸಲು ಈ ಜೋಡಿಗೆ ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ 5 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತ್ತು.