ಅಬುಧಾಬಿ(ಅ.18): ಕೊನೆಯಲ್ಲಿ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಚುರುಕಿನ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ ನೈಟ್‌ ರೈಡರ್ಸ್ 5 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿದ್ದು, ವಾರ್ನರ್ ಪಡೆಗೆ ಸವಾಲಿನ ಗುರಿ ನೀಡಿದೆ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್‌ ರೈಡರ್ಸ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ 48 ರನ್‌ಗಳ ಜತೆಯಾಟವಾಡಿದರು. ರಾಹುಲ್ ತ್ರಿಪಾಠಿ(23)ಯ ವಿಕೆಟ್ ಪಡೆಯುವ ಮೂಲಕ ಟಿ ನಟರಾಜನ್ ಹೈದರಾಬಾದ್‌ಗೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇನ್ನು ಉತ್ತಮವಾಗಿ ಅಡುತ್ತಿದ್ದ ಗಿಲ್(36) ಅವರನ್ನು ರಶೀದ್ ಖಾನ್ ಪೆವಿಲಿಯನ್ನಿಗಟ್ಟಿದರು. ಇನ್ನು ಇದರ ಬೆನ್ನಲ್ಲೇ ನಿತೀಶ್ ರಾಣಾ(29) ಕೂಡಾ ಪೆವಿಲಿಯನ್ ಸೇರಿದರು. ಆಂಡ್ರೆ ರಸೆಲ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. 11 ಎಸೆತಗಳಲ್ಲಿ 9 ರನ್ ಬಾರಿಸಿ ನಟರಾಜನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದ ಮಾರ್ಗನ್ ಕಾರ್ತಿಕ್:  5ನೇ ವಿಕೆಟ್‌ಗೆ ಜತೆಯಾದ ನಾಯಕ ಇಯಾನ್ ಮಾರ್ಗನ್ ಹಾಗೂ ಮಾಜಿ ನಾಯಕ ದಿನೇಶ್ ಕಾರ್ತಿಕ್ ಕೆಕೆಆರ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ 5ನೇ ವಿಕೆಟ್‌ಗೆ 58 ರನ್‌ಗಳ ಜತೆಯಾಟವಾಡಿದರು. ಇಯಾನ್ ಮಾರ್ಗನ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದಿನೇಶ್ ಕಾರ್ತಿಕ್ 29 ರನ್ ಬಾರಿಸಿ ಅಜೇಯರಾಗುಳಿದರು. 

ಸನ್‌ರೈಸರ್ಸ್ ಹೈದರಾಬಾದ್ ಪರ ಟಿ ನಟರಾಜನ್ 2 ವಿಕೆಟ್ ಪಡೆದರೆ, ರಶೀದ್ ಖಾನ್, ಬಾಸಿಲ್ ಥಂಪಿ ಹಾಗೂ ವಿಜಯ ಶಂಕರ್ ತಲಾ ಒಂದೊಂದು ವಿಕೆಟ್ ಪಡೆದರು.