ದುಬೈ(ನ.10): ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಅಷ್ಟೇ ವೇಗದಲ್ಲಿ ಕಮ್‌ಬ್ಯಾಕ್ ಮಾಡಿತು. ಶ್ರೇಯಸ್ ಅಯ್ಯರ್ ಹೋರಾಟ, ರಿಷಬ್ ಪಂತ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ವಿರುದ್ಧ 156 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಹಂತದಲ್ಲಿ ಆಘಾತ ಅನುಭವಿಸಿತು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ಅಜಿಂಕ್ಯ ರಹಾನೆ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಸ್ಟೊಯ್ನಿಸ್ ಶೂನ್ಯಕ್ಕೆ ಔಟಾದರೆ, ರಹಾನೆ 2 ರನ್ ಸಿಡಿಸಿ ಔಟಾದರು. ಇನ್ನು ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಶಿಖರ್ ಧವನ್ 15 ರನ್ ಸಿಡಿಸಿ ಔಟಾದರು.

ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು. ಅಲ್ಪ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕೋ ಮುಂಬೈ ಇಂಡಿಯನ್ಸ್ ಪ್ಲಾನ್ ಉಲ್ಟಾ ಹೊಡೆಯಿತು.  ರಿಷಬ್ ಪಂತ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಪಂತ್ 38 ಎಸೆತದಲ್ಲಿ 56 ರನ್ ಸಿಡಿಸಿ ಐಟಾದರು. ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟ ನೀಡಿ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ ಶಿಮ್ರೊನ್ ಹೆಟ್ಮೆಯರ್ ವಿಕೆಟ್ ಪತನಗೊಂಡಿತು. ಅಕ್ಸರ್ ಪಟೇಲ್ ಜೊತೆ ಸೇರಿದ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟ ನೀಡಿದರು.

ಅಕ್ಸರ್ ಪಟೇಲ್ ಹಾಗೂ ಕಾಗಿಸೋ ರಬಾಡ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಅಯ್ಯರ್ ಅಜೇಯ 65 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿತು.