ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸುರೇಶ್ ರೈನಾ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಸಿಎಸ್‌ಕೆ ಅಭಿಮಾನಿಗಳಲ್ಲಿ ಸಿಎಸ್‌ಕೆ ತಂಡದ ಉಪನಾಯಕ ಯಾರು ಎನ್ನುವ ಕುತೂಹಲ ಜೋರಾಗಿದೆ. ಇದಕ್ಕೆ ಸಿಎಸ್‌ಕೆ ಚಾಣಾಕ್ಷ ಉತ್ತರವನ್ನೇ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಸೆ.03): ವೈಯುಕ್ತಿಕ ಕಾರಣಗಳಿಂದಾಗಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಸುರೇಶ್ ರೈನಾ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕರಾಗಿದ್ದ ಸುರೇಶ್ ರೈನಾ ಇದೀಗ ಟೂರ್ನಿಯಿಂದ ಹಿಂದೆ ಸರಿದಿದ್ದರಿಂದ ಸಿಎಸ್‌ಕೆ ಅಭಿಮಾನಿಗಳು ಮುಂದಿನ ಉಪನಾಯಕ ಯಾರು ಎನ್ನುವುದರ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ.

ಹೌದು, ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಉಪನಾಯಕ ಯಾರು ಎಂದು ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಿಎಸ್‌ಕೆ ಫ್ರಾಂಚೈಸಿಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಸಿಎಸ್‌ಕೆ ಚಾಣಾಕ್ಷ ಉತ್ತರವನ್ನು ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಲಿಯೋ ಎನ್ನುವ ಅಭಿಮಾನಿಯೊಬ್ಬ ನಮ್ಮ ಸಿಎಸ್‌ಕೆ ತಂಡದ ಉಪನಾಯಕ ಯಾರು ಎಂದು ಚೆನ್ನೈ ಮೂಲದ ಐಪಿಎಲ್ ಫ್ರಾಂಚೈಸಿಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ತಮಿಳಿನಲ್ಲೇ ಉತ್ತರ ನೀಡಿರುವ ಸಿಎಸ್‌ಕೆ, ವೈಸ್ ಕ್ಯಾಪ್ಟನ್ ಇರುಕ್ಕೆ ಭಯಂ ಏನು? ಎನ್ನುವ ಉತ್ತರ ನೀಡಿದೆ.

ಸುರೇಶ್‌ ರೈನಾ ನನ್ನ ಮಗ ಇದ್ದಂತೆ ಆದರೆ ಸಿಎಸ್‌ಕೆಗೆ ಮತ್ತೆ ಕರೆಯುವುದಿಲ್ಲ: ಶ್ರೀನಿವಾಸನ್‌

Scroll to load tweet…
Scroll to load tweet…

ಇದರ ಅರ್ಥ ಬುದ್ಧಿವಂತ ನಾಯಕ ಇರಬೇಕಾದರೆ, ಇನ್ನು ಭಯವೇಕೆ ಎನ್ನುವುದಾಗಿದೆ. ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದು, ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಎನಿಸಿದೆ. ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದರಲ್ಲೂ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕೂದಲೆಳೆ ಅಂತರದಲ್ಲಿ ನಾಲ್ಕನೇ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿ ಈ ಸಲ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಯುಎಇನ ಅಬುಧಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಪಂದ್ಯಾವಳಿಗಳು ಜರುಗಲಿದ್ದು, ಚುಟುಕು ಕ್ರಿಕೆಟ್ ಮಹಾ ಸಂಗ್ರಾಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.