ಅಬು ಧಾಬಿ(ನ.06) : ಎಲಿಮಿನೇಟರ್ ಪಂದ್ಯದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟೇ ಅಲ್ಲ ದಿಟ್ಟ ಹೋರಾಟ ನೀಡಲೇಬೇಕು. ಕಾರಣ ಒಂದು ಸಣ್ಣ ತಪ್ಪಿನಿಂದ ಟೂರ್ನಿಯಿಂದಲೇ ಹೊರಬೀಳವು ಸಂದರ್ಭ ಸೃಷ್ಟಿಯಾಗಲಿದೆ. ಇದೇ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 131 ರನ್ ಸಿಡಿಸಿದೆ.

ಎಬಿ ಡಿವಿಲಿಯರ್ಸ್ ಹಾಗೂ ಆ್ಯರೋನ್ ಫಿಂಚ್ ಹೋರಾಟ ಆರ್‌ಸಿಬಿ ತಂಡದ ಮಾನ ಕಾಪಾಡಿತು. ಕಾರಣ ಆರಂಭಿಕನಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸಲಿಲ್ಲ. ಕೊಹ್ಲಿ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಆರ್‌ಸಿಬಿಗೆ ಉತ್ತಮ ಆರಂಭ ನೀಡುತ್ತಿದ್ದ ದೇವದತ್ ಪಡಿಕ್ಕಲ್ ಕೇವಲ 1 ರನ್ ಸಿಡಿಸಿ ಔಟಾದರು.

ಆ್ಯರೋನ್ ಫಿಂಚ್ 32 ರನ್ ಕಾಣಿಕೆ ನೀಡಿದರು. ಎಬಿ ಡಿವಿಲಿಯರ್ಸ್ ಅರ್ಧಶತಕ ಸಿಡಿಸಿ ಹೋರಾಟ ಮುಂದುವರಿಸಿದರು. ಆದರೆ ಮೊಯಿನ್ ಆಲಿ, ಶಿವಂ ದುಬೆ ಜವಾಬ್ದಾರಿ ಮರೆತರು. ವಾಶಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿ ಕಾಣಿಸಲೇ ಇಲ್ಲ. ಎಬಿಡಿ 56 ರನ್ ಸಿಡಿಸಿ ಔಟಾದರು.

ಎಬಿಡಿ ಹೋರಾಟದಿಂದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಅಬು ದಾಬಿ ಪಿಚ್‌ನಲ್ಲಿ ಸನ್ರೈಸರ್ಸ್ ಈ ಮೊತ್ತ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಇತ್ತ ಆರ್‌ಸಿಬಿ ಪ್ರಮುಖ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಹೆಚ್ಚಿಸಿದೆ.