ದುಬೈ(ಅ.14): ಸತತ 4 ಸೋಲುಗಳ ಬಳಿಕ ಗೆಲುವನ್ನು ಕಂಡಿರುವ ರಾಜಸ್ಥಾನ ರಾಯಲ್ಸ್, 5 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಎದುರು ಇಲ್ಲಿ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿದೆ. 

ಈ ಆವೃತ್ತಿಯಲ್ಲಿ ಮೊದಲೆರೆಡು ಪಂದ್ಯದಲ್ಲಿ ಗೆದ್ದಿದ್ದ ರಾಜಸ್ಥಾನ ಬಳಿಕ 4 ಪಂದ್ಯದಲ್ಲಿ ಹೀನಾಯ ಸೋಲುಕಂಡಿತ್ತು. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಜಯದ ಸಿಹಿ ಉಂಡಿರುವ ರಾಜಸ್ಥಾನ, ಇದೀಗ ಬಲಿಷ್ಠ ಡೆಲ್ಲಿ ವಿರುದ್ಧ ಮತ್ತೊಂದು ಜಯದ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಕಳೆದ ವಾರ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ, ರಾಜಸ್ಥಾನವನ್ನು 46 ರನ್‌ಗಳಿಂದ ಮಣಿಸಿತ್ತು. ಟೂರ್ನಿಯಲ್ಲಿ 2ನೇ ಬಾರಿ ಎದುರಾಗುತ್ತಿರುವ ರಾಜಸ್ಥಾನ, ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. 

ರಾಜಸ್ಥಾನ ತಂಡ ಅತ್ಯದ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಆದರೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ನಿರಂತರ ವೈಫಲ್ಯ ಕಾಣುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿರುವುದು ಹೆಚ್ಚಿನ ಬಲ ತಂದಿದೆ. ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸುವ ತಂಡದ ಆಟಗಾರರು ಬ್ಯಾಟಿಂಗ್‌ನಲ್ಲಿ ಎಡವುತ್ತಿದ್ದಾರೆ. ಸ್ಟೋಕ್ಸ್, ಬಟ್ಲರ್, ಸ್ಮಿತ್, ಉತ್ತಪ್ಪ, ಸಂಜು ಬ್ಯಾಟ್‌ನಿಂದ ರನ್ ಹರಿದು ಬರಬೇಕಿದೆ. ಬ್ಯಾಟಿಂಗ್‌ನಲ್ಲೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ನೆಚ್ಚಿಕೊಂಡಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ. 

IPL 2020 ಗೆಲುವಿನ ಹಳಿಗೆ ಮರಳಿದ ಸಿಎಸ್‌ಕೆ..!

ಇನ್ನು ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಇದೀಗ ರಾಜಸ್ಥಾನ ವಿರುದ್ಧ ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. ಡೆಲ್ಲಿ ತಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಪೃಥ್ವಿ, ಧವನ್, ಶ್ರೇಯಸ್ ಅಯ್ಯರ್ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗವನ್ನು ವೇಗಿ ರಬಾಡ ಮುನ್ನಡೆಸುತ್ತಿದ್ದು, ಲಯದಲ್ಲಿದ್ದಾರೆ. ರಬಾಡಗೆ ನೋಕಿಯೆ, ಹರ್ಷಲ್ ಪಟೇಲ್ ಉತ್ತಮ ಬೆಂಬಲ ನೀಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್, ಅಕ್ಷರ್ ತಂಡದ ಬಲ ಹೆಚ್ಚಿಸಿದ್ದಾರೆ. ಆಲ್ರೌಂಡರ್ ಸ್ಟೋಯ್ನಿಸ್ ತಂಡದ ಟ್ರಂಪ್ ಕಾರ್ಡ್ ಎನಿಸಿದ್ದಾರೆ.

ಪಿಚ್ ರಿಪೋರ್ಟ್: ದುಬೈ ಪಿಚ್ ಸಮತೋಲದಿಂದ ಕೂಡಿದೆ. ಪಂದ್ಯದ ಆರಂಭದಲ್ಲಿ ಸ್ವಿಂಗ್ ಬೌಲರ್ ಗಳಿಗೆ ಹೆಚ್ಚು ಯಶಸ್ಸು ದೊರಕಲಿದೆ. ಸಮಯದ ಕಳೆದಂತೆ ಸ್ಪಿನ್ನರ್‌ಗಳು ವಿಕೆಟ್ ಕೀಳಲಿದ್ದಾರೆ. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

ಸಮಯ: ಸಂಜೆ 7.30ಕ್ಕೆ
ಸ್ಥಳ: ದುಬೈ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್