ನವದೆಹಲಿ(ಆ.18):  ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಆ್ಯನ್ರಿಚ್ ನೋರ್ಜೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು(ಆ.18) ಖಚಿತ ಪಡಿಸಿದೆ. ಆ್ಯನ್ರಿಚ್ ನೋರ್ಜೆ ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಭುಜದ ನೋವಿನ ಸಮಸ್ಯೆಯಿಂದಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ನೋರ್ಜೆಗೆ ಸಾಧ್ಯವಾಗಿರಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡಿಕೊಂಡಿರುವುದರ ಬಗ್ಗೆ ಮಾತನಾಡಿದ ಆಫ್ರಿಕಾ ಬಲಗೈ ವೇಗಿ, ನಾನು ಡೆಲ್ಲಿ ತಂಡ ಕೂಡಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಡೆಲ್ಲಿ ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಾಕಷ್ಟು ಹಿರಿ ಕಿರಿಯ ಆಟಗಾರರನ್ನೊಳಗೊಂಡ ತಂಡ ಇದಾಗಿದ್ದು, ಅತ್ಯುತ್ತಮ ಕೋಚ್‌ಗಳನ್ನು ಹೊಂದಿದ್ದಾರೆ. ಇದು ನಾನು ಮತ್ತಷ್ಟು ಕಲಿಯಲು ಉತ್ತಮ ಅವಕಾಶ ಸಿಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಅವಕಾಶ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ಮ್ಯಾನೇಜೆಮೆಂಟ್‌ಗೆ ನಾನು ಆಭಾರಿಯಾಗಿದ್ದೇನೆಂದು ಹೇಳಿದ್ದಾರೆ.

ಆ್ಯನ್ರಿಚ್ ನೋರ್ಜೆ 2019ರಲ್ಲಿ ಭಾರತ ವಿರುದ್ಧವೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಆರು ಟೆಸ್ಟ್ ಪಂದ್ಯಗಳನ್ನಾಡಿರುವ ನೋರ್ಜೆ 19 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಳು ಏಕದಿನ ಪಂದ್ಯಗಳನ್ನಾಡಿ 14 ವಿಕೆಟ್‌ ಪಡೆದಿದ್ದಾರೆ. ಇದರ ಜತೆಗೆ ಮೂರು ಟಿ20 ಪಂದ್ಯಗಳನ್ನಾಡಿ ಎರಡು ವಿಕೆಟ್ ಪಡೆದಿದ್ದಾರೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಾರಕ ವೇಗಿ ಕಗಿಸೋ ರಬಾಡ ಮಿಂಚುತಿದ್ದು, ಇದೀಗ ಮತ್ತೋರ್ವ ಆಫ್ರಿಕಾ ವೇಗಿ ಡೆಲ್ಲಿ ಪಡೆ ಕೂಡಿಕೊಂಡಂತೆ ಅಗಿದೆ.

ಭಾರತದ ಕಂಪನಿ ಮುಂದೆ ಬರದಿದ್ದರೆ IPL ಟೈಟಲ್ ಸ್ಪಾನ್ಸರ್‌ಗೆ ಪತಂಜಲಿ ಸಿದ್ಧ: ರಾಮ್‌ದೇವ್

ಕಳೆದ ವರ್ಷದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರನ್ನು 1.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಈ ವರ್ಷದ ಆರಂಭದಲ್ಲೇ ವೋಕ್ಸ್ ತಾವು ಟೂರ್ನಿಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದಾಗಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು.

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಅಬುದಾಬಿ, ದುಬೈ ಹಾಗೂ ಶಾರ್ಜಾ ಮೈದಾನಗಳು ಈ ಚುಟುಕು ಮಹಾ ಸಂಗ್ರಾಮಕ್ಕೆ ಆತಿಥ್ಯ ವಹಿಸಲಿದೆ.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್‌ ಮಾಡಿ