ನವದೆಹಲಿ(ಆ.31): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಆಗಸ್ಟ್ 29ರಂದು ದುಬೈನಿಂದ ಭಾರತಕ್ಕೆ ಬಂದಿಳಿದಿದ್ದಾರೆ. ರೈನಾ ವೈಯುಕ್ತಿಕ ಕಾರಣದಿಂದಾಗಿ ಭಾರತಕ್ಕೆ ವಾಪಾಸಾಗಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಕೆ.ಎಸ್. ವಿಶ್ವನಾಥನ್ ಖಚಿತ ಪಡಿಸಿದ್ದರು. ಇದರ ಜತೆಗೆ ಈ ಆವೃತ್ತಿಯ ಸಂಪೂರ್ಣ ಟೂರ್ನಿಯಿಂದಲೂ ರೈನಾ ಹೊರಬಿದ್ದಿರುವುದಾಗಿ ವಿಶ್ವನಾಥನ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು.

ಇದಾಗಿ ಕೆಲಹೊತ್ತಿನಲ್ಲೇ ಸುರೇಶ್ ರೈನಾ ಮಾವನವರನ್ನು ಡಕಾಯಿತರ ಗುಂಪು ಹತ್ಯೆ ಮಾಡಿದ್ದರಿಂದ ಮನನೊಂದು ಸುರೇಶ್ ರೈನಾ ತವರಿಗೆ ಮರಳಿದ್ದರು ಎಂದು ವರದಿಯಾಗಿತ್ತು. ಆದರೆ ಇದೀಗ ಸುರೇಶ್ ರೈನಾ ಕಹಾನಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಂತೆ ಆಗಿದ್ದು, ಹೋಟೆಲ್‌ ಕೊಠಡಿ ವಿಚಾರದಲ್ಲಿ ಬೇಸರಗೊಂಡು ಸುರೇಶ್ ರೈನಾ ದುಬೈನಿಂದ ಭಾರತಕ್ಕೆ ಮರಳಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

IPL ಟೂರ್ನಿಯಿಂದ ಹಿಂದೆ ಸರದಿದ್ದೇಕೆ..? ಕುತೂಹಲಕ್ಕೆ ತೆರೆ ಎಳೆದ ರೈನಾ..!

ಸುರೇಶ್ ರೈನಾ ಅವರಿಗೆ ಮೀಸಲಿಟ್ಟಿದ್ದ ಹೋಟೆಲ್‌ ಕೊಠಡಿಯ ಬಗ್ಗೆ ಎಡಗೈ ಬ್ಯಾಟ್ಸ್‌ಮನ್ ಅಸಮಾಧಾನ ಹೊಂದಿದ್ದರು. ಸುರೇಶ್ ರೈನಾ ತಮಗೂ ಧೋನಿಗೆ ನೀಡಿದಂತಹ ಸೌಕರ್ಯವಿರುವ ಕೊಠಡಿ ಬೇಕು ಎಂದು ಬಯಸಿದ್ದರಂತೆ. ಆ ರೀತಿಯ ಕೊಠಡಿ ಸಿಗದೇ ಇದ್ದಿದ್ದಕ್ಕಾಗಿ ರೈನಾ ಬೇಸರಗೊಂಡು ತವರಿಗೆ ಮರಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
 
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊರೋನಾ ಭೀತಿಯನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಸುರೇಶ್ ರೈನಾ ಕೂಡಾ ತಂಡದಿಂದ ಹೊರಬಿದ್ದಿರುವುದು ತಂಡದ ಪಾಲಿಗೆ ದೊಡ್ಡ ಹೊಡೆತ ಆಗುವ ಸಾಧ್ಯತೆಯಿದೆ.