ಧೋನಿ ಪಡೆಗೆ ಮತ್ತೊಂದು ಶಾಕ್: ಸಿಎಸ್‌ಕೆ ತಂಡದಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!
ಸುರೇಶ್ ರೈನಾ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಆಘಾತದಿಂದ ಹೊರಬರುವ ಮುನ್ನವೇ ಇದೀಗ ಮತ್ತೊಬ್ಬ ಅನುಭವಿ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಸೆ.04): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮತ್ತೊಬ್ಬ ಸ್ಟಾರ್ ಆಟಗಾರ ಹೊರಬಿದ್ದಿದ್ದಾರೆ. ಈ ಮೊದಲು ವೈಯುಕ್ತಿಕ ಕಾರಣ ನೀಡಿ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಸಿಎಸ್‌ಕೆ ತಂಡದಿಂದ ಹೊರಗುಳಿದಿದ್ದರು, ಇದೀಗ ಮತ್ತೊಬ್ಬ ಅನುಭವಿ ಬೌಲರ್ ಹರ್ಭಜನ್ ಸಿಂಗ್ ಕೂಡಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಹೌದು, ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ವೈಯುಕ್ತಿಕ ಕಾರಣ ನೀಡಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್ 01ರಂದು ಹರ್ಭಜನ್ ದುಬೈಗೆ ಬಂದಿಳಿಯಬೇಕಿತ್ತು. ಆದರೆ ಇದೀಗ ತಾವು ಈ ಬಾರಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ಫ್ರಾಂಚೈಸಿ ಇನ್ನು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಒಮ್ಮೆ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆಟಗಾರರು ಪತ್ರ ರವಾನಿಸಿದರೆ, ಅಥವಾ ತವರಿಗೆ ಮರಳಿದರೆ ಮತ್ತೆ ತಂಡ ಕೂಡಿಕೊಳ್ಳುವುದು ಕಷ್ಟ. ಅದರಲ್ಲೂ ಕೋವಿಡ್ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ನಿಯಮಾವಳಿಗಳಿದ್ದು, ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್‌ನ ಮತ್ತೋರ್ವ ಸ್ಟಾರ್ ಆಟಗಾರನೂ ಐಪಿಎಲ್‌ನಲ್ಲಿ ಆಡೋದು ಡೌಟ್..!
ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ದೊಡ್ಡ ಹೊಡೆತ ಆಗುವ ಸಾಧ್ಯತೆಯಿದೆ. ಯಾಕೆಂದರೆ ಈಗಾಗಲೇ ಸುರೇಶ್ ರೈನಾ ಕೂಡಾ ಹಿಂದೆ ಸರಿದಿದ್ದಾರೆ. ಇನ್ನು ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್ ಸೇರಿದಂತೆ ಸಿಎಸ್‌ಕೆ ತಂಡದ 13 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಎಲ್ಲವು ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ 19ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಬೇಕಿದೆ. ಆದರೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಎಲ್ಲಾ ಸವಾಲುಗಳನ್ನು ಹೇಗೆ ಅವಕಾಶಗಳನ್ನಾಗಿ ಬಳಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.