ದುಬೈ(ಅ.13):  ಸತತ ಸೋಲಿನ ಮೂಲಕ ಟೀಕೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಗೆಲವಿನ ಸಿಹಿ ಕಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 20 ರನ್  ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

168 ರನ್ ಗುರಿ ಪಡೆದೆ ಸನ್‌ರೈಸರ್ಸ್ ಹೈದರಾಬಾದ್ ತಂಡ 23 ರನ್ ಕೆಲೆಹಾಕುವಷ್ಟರಲ್ಲೇ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ವಾರ್ನರ್ 9 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮನೀಶ್ ಪಾಂಡೆ ರನೌಟ್‌ಗೆ ಬಲಿಯಾದರು. 

ಜಾನಿ ಬೈರ್‌ಸ್ಟೋ ಹಾಗೂ ಕೇನ್ ವಿಲಿಯಮ್ಸನ್ ಜೊತೆಯಾಟ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಬೈರ್‌ಸ್ಟೋ 23 ರನ್ ಸಿಡಿಸಿ ಔಟಾದರು. ಪ್ರಿಯಂ ಗರ್ಗ್ 16 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಕೇನ್ ವಿಲಿಯಮ್ಸ್ ಬ್ಯಾಟಿಂಗ್ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ವಿಲಿಯಮ್ಸನ್‌ಗೆ ವಿಜಯ್ ಶಂಕರ್ ಉತ್ತಮ ಸಾಥ್ ನೀಡಿದರು. ಆದರೆ ಶಂಕರ್ 12 ರನ್ ಸಿಡಿಸಿ ಔಟಾದರು. ಇತ್ತ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇನ್ ವಿಲಿಯಮ್ಸನ್ 57 ರನ್ ಸಿಡಿಸಿ ನಿರ್ಗಮಿಸಿದರು. ವಿಲಿಯಮ್ಸನ್ ವಿಕೆಟ್ ಸಿಎಸ್‌ಕೆ ಆತ್ಮವಿಶ್ವಾಸ ಹೆಚ್ಚಿಸಿತು. 

ರಶೀದ್ ಖಾನ್ ಹಾಗೂ ಶಹಬಾಜ್ ನದೀಮ್ ಸಿಕ್ಸರ್ ಮೂಲಕ ಚೆನ್ನೈ ಒತ್ತಡ ಹೆಚ್ಚಿಸಿದರು. ರಶೀದ್ 14 ರನ್ ಸಿಡಿಸಿ ಔಟಾದರು. ಹೈದರಾಬಾದ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು. ನದೀಮ್ 5 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತು. ಈ ಮೂಲಕ ಚೆನ್ನೈ 20 ರನ್ ಗೆಲುವು ಕಂಡಿತು. ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.