ಅಬು ಧಾಬಿ(ಅ.25):  ಪ್ಲೇ ಆಫ್ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗುತ್ತಿದೆ. ಕಾರಣ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದ ತಂಡಗಳು ಇದೀಗ ಬಲಿಷ್ಠ ತಂಡಗಳನ್ನು ಸೋಲಿಸುತ್ತಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಆರ್‌ಸಿಬಿ ತಂಡವನ್ನು ಸೋಲಿಸಿತ್ತು. 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್,  ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.

ಗೆಲುವಿಗೆ 196 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಬಹುಬೇಗನೆ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್ ಕೂಡ ಪೆವಿಲಿಯನ್ ಸೇರಿಕೊಂಡರು. ಈ ಪಂದ್ಯವೂ ಕೂಡ ರಾಜಸ್ಥಾನ ಕೈಚೆಲ್ಲಲಿದೆ ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಬೆನ್ ಸ್ಟೋಕ್ಸ್ ಹಾಗೂ ಸಂಜು ಸಾಮ್ಸನ್ ಪಂದ್ಯದ ಗತಿ ಬದಲಿಸಿದರು.

ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಸ್ಟೋಕ್ಸ್ ಹಾಗೂ ಸ್ಯಾಮ್ಸನ್ ಅಬ್ಬರಕ್ಕೆ ಮುಂಬೈ ಬೌಲರ್‌ಗಳು ಕಂಗಾಲಾದರು. ರಾಜಸ್ಥಾನ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಆಲೋಚನೆಯಲ್ಲಿದ್ದ ಮುಂಬೈ ತಂಡಕ್ಕೆ, ರಾಜಸ್ಥಾನ ಶಾಕ್ ನೀಡಿತು. 

ಅಬ್ಬರಿಸಿದ ಬೆನ್ ಸ್ಟೋಕ್ಸ್ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸಿದರು. ಸ್ಟೋಕ್ಸ್ ಅಜೇಯ 107 ರನ್ ಸಿಡಿಸಿದರೆ, ಸ್ಯಾಮ್ಸನ್ ಅಜೇಯ 54 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 18.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 8 ವಿಕೆಟ್ ಭರ್ಜರಿ ಗೆಲುವು ದಾಖಲಿದ ರಾಜಸ್ಥಾನ ರಾಯಲ್ಸ್ 6ನೇ ಸ್ಥಾನಕ್ಕರಿತು.