ದುಬೈ(ಸೆ.01): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಕೇನ್ ರಿಚರ್ಡ್‌ಸನ್ ಅವರು ವೈಯುಕ್ತಿಕ ಕಾರಣದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆಸೀಸ್‌ ಸ್ಪಿನ್ನರ್ ಆ್ಯಡಂ ಜಂಪಾ ತಂಡ ಕೂಡಿಕೊಂಡಿದ್ಧಾರೆ.

ಕೇನ್‌ ರಿಚರ್ಡ್‌ಸನ್ ಅವರ ಸ್ಥಾನವನ್ನು ಆ್ಯಡಂ ಜಂಪಾ ತುಂಬಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ವಿಚಾರವನ್ನು ಖಚಿತಪಡಿಸಿದೆ. ಆ್ಯಡಂ ಜಂಪಾ ಅವರನ್ನು RCB ಜೆರ್ಸಿಯಲ್ಲಿ ನೋಡುವುದಕ್ಕೆ ಖುಷಿಯಾಗುತ್ತಿದೆ. ಅವರು ಕೇನ್ ರಿಚರ್ಡ್‌ಸನ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.

ಕೇನ್ ರಿಚರ್ಡ್‌ಸನ್ ಹಾಗೂ ಅವರ ಪತ್ನಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೇನ್‌ ರಿಚರ್ಡ್‌ಸನ್ ಅವರು ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ನಿರ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೌರವಿಸುತ್ತದೆ ಎಂದು ತಿಳಿಸಿದೆ.

ನಾವು ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಕೇನ್‌ ಅವರ ಪ್ರತಿಭೆಯನ್ನು ಬಳಸಿಕೊಳ್ಳಲು ವಿಫಲವಾಗುತ್ತಿರುವುದರ ಬಗ್ಗೆ ಬೇಸರವಾಗುತ್ತಿದೆ, ಅವರೊಬ್ಬ ಅದ್ಭುತ ಬೌಲರ್. ಆದರೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಇನ್ನು ಚಹಲ್‌ಗೆ ಮತ್ತೊಂದು ತುದಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಲೆಗ್ ಸ್ಪಿನ್ನರ್ ಜಂಪಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮತ್ತೊಬ್ಬ ಅನುಭವಿ ಸ್ಪಿನ್ನರ್ ಕಣಕ್ಕಿಳಿಸಲು ಮತ್ತೊಂದು ಆಯ್ಕೆ ಸಿಗಲಿದೆ ಎಂದು ರಾಯಲ್ ಚಾಲೆಂಜರ್ಸ್ ತಂಡದ ಡೈರೆಕ್ಟರ್ ಮೈಕ್ ಹೆಸನ್ ಹೇಳಿದ್ದಾರೆ.

IPL 2020: ಉದ್ಘಾಟನಾ ಪಂದ್ಯದಲ್ಲಿ RCB ವರ್ಸಸ್‌ ಮುಂಬೈ ಇಂಡಿಯನ್ಸ್?

2019ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೇನ್ ರಿಚರ್ಡ್‌ಸನ್‌ ಅವರನ್ನು 4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಮೂಲ ಬೆಲೆ 1.5 ಕೋಟಿ ರುಪಾಯಿ ಹೊಂದಿದ್ದ ಜಂಪಾ ಅವರನ್ನು ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಸ್ಪಿನ್ ಆಯ್ಕೆಗಳಿದ್ದು, ಯುಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಮೊಯೀನ್ ಅಲಿ, ಪವನ್ ನೇಗಿ, ಶಾದಾಬ್ ನದೀಮ್ ಅವರಂತಹ ಸ್ಪಿನ್ನರ್‌ಗಳಿದ್ದಾರೆ.