ದುಬೈ(ಆ.29): ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್‌ ರಾಯ್ ಮುಂಬರುವ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.

30 ವರ್ಷದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೈಯುಕ್ತಿಕ ಕಾರಣಗಳನ್ನು ನೀಡಿ 13ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಡೆಲ್ಲಿ ತಂಡ ಕೂಡಿಕೊಂಡಿದ್ದಾರೆ.

ಜೇಸನ್ ರಾಯ್ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಿಂದಲೂ ಹೊರಬಿದ್ದಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ಸರಣಿ ಬಳಿಕ ಅಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೆ ಸಂಪೂರ್ಣ ಲಭ್ಯವಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ರಾಯ್ ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಆಸೀಸ್ ಮಾಜಿ ವೇಗಿ ನೇಮಕ..!

ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಡೇನಿಯಲ್ ಸ್ಯಾಮ್ಸ್ ಈ ಸರಣಿ ಮುಕ್ತಾಯವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಸ್ಯಾಮ್ಸ್ ಪಾಲಿಗೆ ಇದು ಚೊಚ್ಚಲ ಐಪಿಎಲ್ ಟೂರ್ನಿಯಾಗಲಿದೆ. ಐಪಿಎಲ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಆಸ್ಟ್ರೇಲಿಯಾದ ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಜೇಸನ್ ರಾಯ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಹಿಂದೆ ಸರಿಯುತ್ತಿರುವ ಎರಡನೇ ಇಂಗ್ಲೆಂಡ್ ಆಟಗಾರ ಎನಿಸಿದ್ದಾರೆ. ಈ ಮೊದಲು ಕ್ರಿಸ್ ವೋಕ್ಸ್ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸುವ ಉದ್ದೇಶದಿಂದ ಐಪಿಎಲ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದರು. ವೋಕ್ಸ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆನ್ರಿಚ್ ನೋರ್ಜೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ಜೇಸನ್ ರಾಯ್ ಅನುಪಸ್ಥಿತಿ ತಂಡಕ್ಕೆ ಅಷ್ಟೇನೂ ಹಿನ್ನಡೆಯಾಗದು. ಯಾಕೆಂದರೆ ಅಗ್ರ ಕ್ರಮಾಂಕದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್, ಪೃಥ್ವಿ ಶಾ, ಅಲೆಕ್ಸ್ ಕ್ಯಾರಿ ಅವರಂತಹ ಅಗ್ರಕ್ರಮಾಂಕದ ಆಟಗಾರನ್ನು ಹೊಂದಿದೆ. ಇನ್ನು ಅಜಿಂಕ್ಯ ರಹಾನೆ ಕೂಡಾ ಈ ಬಾರಿ ಡೆಲ್ಲಿ ತಂಡವನ್ನು ಕೂಡಿಕೊಂಡಿದ್ದು ತಂಡದ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಗೊಳಿಸಿದೆ.