ದುಬೈ(ಅ.17): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಸೂಪರ್ ಮ್ಯಾನ್ ಎಬಿ ಡಿವಿಲಿಯರ್ಸ್ ಬಾರಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಎಬಿಡಿ ಪಂದ್ಯ ಗೆಲ್ಲಿಸುವುದರ ಜತೆಗೆ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸೂಪರ್ ಮ್ಯಾನ್ ಎಬಿಡಿ: ಎಬಿ ಡಿವಿಲಿಯರ್ಸ್ ಕ್ರೀಸ್‌ನಲ್ಲಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. 19ನೇ ಓವರ್‌ನಲ್ಲಿ ಜಯದೇವ್ ಉನಾದ್ಕತ್‌ಗೆ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಎಬಿ ಡಿವಿಲಿಯರ್ಸ್ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು. ಕೊನೆಯ 24 ಎಸೆತಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು 54 ರನ್‌ಗಳ ಅಗತ್ಯವಿತ್ತು. ಆದರೆ ಎಬಿಡಿ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ರೋಚಕ ಜಯ ತಂದಿತ್ತರು. ಕೇವಲ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಎಬಿ ಡಿವಿಲಿಯರ್ಸ್ ಅಜೇಯ 55 ರನ್ ಬಾರಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಎವಿಡಿ ಯಶಸ್ವಿಯಾದರು.

ಪಂದ್ಯದ ದಿಕ್ಕನ್ನೇ ಬದಲಿಸಿದ 19ನೇ ಓವರ್: ಕೊನೆಯ 2 ಓವರ್‌ವರೆಗೂ ಬಹುತೇಕ ಪಂದ್ಯ ರಾಜಸ್ಥಾನ ರಾಯಲ್ಸ್ ತಂಡದ ಹಿಡಿತದಲ್ಲೇ ಇತ್ತು. ಆದರೆ 19ನೇ ಓವರ್‌ನಲ್ಲಿ ಜಯದೇವ್ ಉನಾದ್ಕತ್ ಬೌಲಿಂಗ್‌ನಲ್ಲಿ ಮನಬಂದಂತೆ ದಂಡಿಸಿದ ಎಬಿಡಿ ಹಾಗೂ ಗುರುಕೀರತ್ ಮನ್ 25 ರನ್ ದೋಚಿದರು. ಎಬಿಡಿ ಬಾರಿಸಿದ ಹ್ಯಾಟ್ರಿಕ್ ಸಿಕ್ಸರ್ ನೋಡದವರೇ ಇಂದಿನ ನತದೃಷ್ಟ ಕ್ರಿಕೆಟ್ ಅಭಿಮಾನಿಗಳೆಂದರೆ ಅತಿಶಯೋಕ್ತಿಯಾಗಲಾರದು.

ಈ ಮೂರು ತಂಡಗಳು ಖಚಿತವಾಗಿ ಪ್ಲೇ ಆಫ್ ಪ್ರವೇಶಿಸುತ್ತವೆ; ಭವಿಷ್ಯ ನುಡಿದ ಅಜಿತ್ ಅಗರ್‌ಕರ್

ರಾಜಸ್ಥಾನ ನೀಡಿದ್ದ 178 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿಂಚ್ ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ನಾಯಕ ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಜೋಡಿ 79 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪಡಿಕ್ಕಲ್ (35), ನಾಯಕ ವಿರಾಟ್ ಕೊಹ್ಲಿ(43) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ನೆರವಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. ನಾಯಕ ಸ್ಟೀವ್ ಸ್ಮಿತ್(57) ಹಾಗೂ ರಾಬಿನ್ ಉತ್ತಪ್ಪ(41) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ತಂಡ 177 ರನ್ ಕಲೆಹಾಕಲು ನೆರವಾದರು.