ಶಾರ್ಜಾ(ಅ.12): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ  ರಾಯಲ್ ಚಾಲೆಂಜರ್ಸ್ ಬೆಂಗಳೂರು 194 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆರ್‌ಸಿಬಿ ಆ್ಯರೋನ್ ಫಿಂಚ್ ಹಾಗೂ  ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡಿದರು. ಕಳಪೆ ಫಾರ್ಮ್ ಸಮಸ್ಯೆ ಅನುಭವಿಸುತ್ತಿದ್ದ ಫಿಂಚ್, ಕೆಕೆಆರ್ ವಿರುದ್ಧ ಅಬ್ಬರಿಸಿದರು. ಇತ್ತ ದೇವದತ್ ಪಡಿಕ್ಕಲ್ ಕೂಡ ಉತ್ತಮ ಸಾಥ್ ನೀಡಿದರು. ಪಡಿಕ್ಕಲ್ 23 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. 

ಆ್ಯರೋನ್ ಫಿಂಚ್ 37 ಎಸೆತದಲ್ಲಿ 47 ರನ್ ಸಿಡಿಸಿ ನಿರ್ಗಮಿಸಿದರು. ಫಿಂಚ್ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಾಟ ಆರಂಭಗೊಂಡಿತು. 7ರ ರನ್‌ರೇಟ್‌ನಲ್ಲಿದ್ದ ಆರ್‌ಸಿಬಿ ರನ್, ಎಬಿಡಿ ಅಬ್ಬರದಿಂದ ದಿಢೀರ್ ಹೆಚ್ಚಾಯಿತು. ಎಬಿ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರು.

ಡಿವಿಲಿಯರ್ಸ್‌ಗೆ, ಕೊಹ್ಲಿ ಉತ್ತಮ ಸಾಥ್ ನೀಡಿದರು. ಎಬಿ ಡಿವಿಲಿಯರ್ಸ್ 33 ಎಸೆತದಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 73 ರನ್ ಸಿಡಿಸಿದರು. ಕೊಹ್ಲಿ ಅಜೇಯ 33 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿತು.