ದುಬೈ(ನ.10): ಕೊರೋನಾದಿಂದಾಗಿ ನಡೆಯುತ್ತೋ ಇಲ್ಲವೋ ಎನ್ನುವಂತಾಗಿದ್ದ 2020ರ ಐಪಿಎಲ್‌ ಟೂರ್ನಿ ಯಶಸ್ವಿಯಾಗಿ ಆಯೋಜನೆಗೊಂಡು ಅಂತಿಮ ಹಂತ ತಲುಪಿದೆ. ಈ ಆವೃತ್ತಿಯ 60ನೇ ಹಾಗೂ ಫೈನಲ್‌ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಹಾಲಿ ಹಾಗೂ 4 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಲಿವೆ.

ಪ್ರಚಂಡ ಲಯದಲ್ಲಿರುವ ಮುಂಬೈ 5ನೇ ಬಾರಿಗೆ ಟ್ರೋಫಿ ಗೆದ್ದು ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳುವ ಗುರಿ ಹೊಂದಿದ್ದರೆ, ಡೆಲ್ಲಿ ಕಪ್‌ ಗೆದ್ದು ಇತಿಹಾಸ ಬರೆಯಲು ತಹತಹಿಸುತ್ತಿದೆ. ಈ ಎರಡು ತಂಡಗಳು ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದು ಮೊದಲ ಕ್ವಾಲಿಫೈಯರ್‌ನಲ್ಲಿ ಸೆಣಸಿದ್ದವು. ಸಂಘಟಿತ ಪ್ರದರ್ಶನ ತೋರಿದ್ದ ಮುಂಬೈ, 57 ರನ್‌ಗಳ ಜಯ ಸಾಧಿಸಿ ಫೈನಲ್‌ಗೇರಿತ್ತು. ಡೆಲ್ಲಿ, 2ನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸ​ರ್ಸ್ ಹೈದರಾಬಾದ್‌ ವಿರುದ್ಧ ಸೆಣಸಿ, ಫೈನಲ್‌ ಟಿಕೆಟ್‌ ಗಳಿಸಿತ್ತು.

ಲೀಗ್‌ ಹಂತದಲ್ಲಿ 2 ಬಾರಿ ಮುಖಾಮುಖಿಯಾದಾಗಲೂ ಮುಂಬೈ ಮೇಲುಗೈ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಜಯಿಸಿದ್ದ ಮುಂಬೈ, 2ನೇ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು. ಫೈನಲ್‌ ಪಂದ್ಯದಲ್ಲೂ ಮುಂಬೈ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

IPL 2020: ಅತ್ಯುತ್ತಮ ಪ್ಲೇಯಿಂಗ್ XI ತಂಡ ಪ್ರಕಟಿಸಿದ ಟಾಮ್ ಮೂಡಿ; ಇಬ್ಬರು RCB ಆಟಗಾರರಿಗೆ ಸ್ಥಾನ..!

ಬಲಿಷ್ಠವಾಗಿದೆ ಮುಂಬೈ: ಹಾಲಿ ಚಾಂಪಿಯನ್‌ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್‌ನಲ್ಲಿ ರೋಹಿತ್‌, ಡಿಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌, ಪೊಲ್ಲಾರ್ಡ್‌ರಂತಹ ಘಟಾನುಘಟಿಗಳಿದ್ದಾರೆ. ಈ ಪೈಕಿ ಪ್ರತಿಯೊಬ್ಬರೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ ವಿಭಾಗ ಸಹ ಅತ್ಯಂತ ಬಲಿಷ್ಠವಾಗಿದೆ. ಬುಮ್ರಾ, ಬೌಲ್ಟ್‌, ಕೌಲ್ಟರ್‌-ನೈಲ್‌ ವೇಗದ ದಾಳಿ ನಡೆಸಿದರೆ, ರಾಹುಲ್‌ ಚಹರ್‌ ಹಾಗೂ ಕೃನಾಲ್‌ ಪಾಂಡ್ಯ ಸ್ಪಿನ್‌ ಬೌಲಿಂಗ್‌ ನಿಭಾಯಿಸಲಿದ್ದಾರೆ. ಡೆಲ್ಲಿ ತಂಡ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಆಕ್ರಮಣಕಾರಿ ಪ್ರದರ್ಶನ ತೋರಬೇಕಿದೆ.

ಡೆಲ್ಲಿ ಕೈ ಹಿಡಿಯಬೇಕಿದೆ ಅದೃಷ್ಟ: 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ ತೋರಿದ ಹೋರಾಟಕ್ಕೆ ಫಲ ಸಿಕ್ಕಿತ್ತು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಮಾಡಿದ ಬದಲಾವಣೆ ಕೈ ಹಿಡಿದಿತ್ತು. ಕಗಿಸೋ ರಬಾಡ, ಏನ್ರಿಚ್‌ ನೋಕಿಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ರನ್‌ ನಿಯಂತ್ರಿಸುವುದರ ಜೊತೆಗೆ ವಿಕೆಟ್‌ಗಳನ್ನೂ ಕೀಳಬೇಕಿದೆ. ಮುಂಬೈ ಬ್ಯಾಟ್ಸ್‌ಮನ್‌ಗಳು ಒಂದೆರಡು ಓವರ್‌ಗಳಲ್ಲಿ ಪಂದ್ಯದ ಗತಿ ಬದಲಿಸಬಲ್ಲರು. ಹೀಗಾಗಿ ಡೆಲ್ಲಿ ಬೌಲರ್‌ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.

ಮುಂಬೈಗೆ ಫೈನಲ್‌ನಲ್ಲಿ ಆಡಿದ ಅನುಭವವಿದ್ದು ಒತ್ತಡ ನಿಭಾಯಿಸುವುದು ಹೇಗೆ ಎನ್ನುವುದು ತಿಳಿದಿದೆ. ಆದರೆ ಡೆಲ್ಲಿಗಿದು ಹೊಸ ಅನುಭವ. ಪಂದ್ಯದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ತಂಡ ಟ್ರೋಫಿಗೆ ಮುತ್ತಿಡಲಿದೆ.

ಪಿಚ್‌ ರಿಪೋಟ್‌: ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಉತ್ತಮ ಮೊತ್ತ ನಿರೀಕ್ಷೆ ಮಾಡಲಾಗಿದೆ. ಸಂಜೆ ನಂತರ ಇಬ್ಬನಿ ಬೀಳಲಿದ್ದು, 2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕಷ್ಟವಾಗಲಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌(ನಾಯಕ), ಡಿ ಕಾಕ್‌, ಸೂರ್ಯಕುಮಾರ್‌, ಇಶಾನ್‌, ಹಾರ್ದಿಕ್‌, ಪೊಲ್ಲಾರ್ಡ್‌, ಕೃನಾಲ್‌, ಕೌಲ್ಟರ್‌-ನೈಲ್‌, ಬೌಲ್ಟ್‌, ಚಹರ್‌, ಬೂಮ್ರಾ.

ಡೆಲ್ಲಿ: ಸ್ಟೋಯ್ನಿಸ್‌, ಧವನ್‌, ರಹಾನೆ, ಶ್ರೇಯಸ್‌(ನಾಯಕ), ಹೆಟ್ಮೇಯರ್‌, ರಿಷಬ್‌ ಪಂತ್‌, ಅಕ್ಷರ್‌, ಅಶ್ವಿನ್‌, ರಬಾಡ, ಪ್ರವೀಣ್‌ ದುಬೆ, ಏನ್ರಿಚ್‌ ನೋಕಿಯ.

ಸ್ಥಳ: ದುಬೈ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್