ಸಿಎಸ್‌ಕೆ ಅಭ್ಯಾಸ ಶಿಬಿರ ವಿಳಂಬ: ಸೆಪ್ಟೆಂಬರ್ 6ರಿಂದ ಶುರು?
3 ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೆಪ್ಟೆಂಬರ್ ಮೊದಲ ವಾರಾಂತ್ಯದ ವೇಳೆಗೆ ಆರಂಭವಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.31): ಐಪಿಎಲ್‌ನ ಬಲಿಷ್ಠ ತಂಡ ಎನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಪರಿಣಾಮ ಚೆನ್ನೈನ ಅಭ್ಯಾಸ ಶಿಬಿರ ಸೆ.1ರ ಬದಲು ಸೆ.6ರಿಂದ ಆರಂಭವಾಗಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಚೆನ್ನೈನಲ್ಲಿ ಒಂದು ವಾರ ಅಭ್ಯಾಸದ ಬಳಿಕ ಆ.21ಕ್ಕೆ ದುಬೈಗೆ ಬಂದಿಳಿದಿದ್ದ ಸಿಎಸ್‌ಕೆ ತಂಡ, ಇಲ್ಲಿ 6 ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಿತ್ತು. ಆ.28ರಿಂದ ಚೆನ್ನೈ ತಂಡದ ಅಭ್ಯಾಸ ಶಿಬಿರ ಆರಂಭವಾಗಲಿದೆ ಎನ್ನಲಾಗಿತ್ತು. ಅಷ್ಟರಲ್ಲೇ ಚೆನ್ನೈ ತಂಡದ ಆಟಗಾರರು ಸೇರಿ 13 ಸಿಬ್ಬಂದಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತು. ಸೋಂಕಿರುವವರಿಗೆ 14 ದಿನ ಕ್ವಾರಂಟೈನ್ ಮಾಡುವುದರಿಂದ ಚೆನ್ನೈ ತಂಡದ ಅಭ್ಯಾಸ ಶಿಬಿರ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ.
ಸ್ಥಿರ ಪ್ರದರ್ಶನದ ಮೂಲಕ ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೂದಲೆಳೆ ಅಂತರದಲ್ಲಿ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಹೀಗಾಗಿ ಈ ಬಾರಿ ಮತ್ತೊಮ್ಮೆ ಧೋನಿ ಪಡೆ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ.
IPL 2020 ಚೆನ್ನೈ ಸೂಪರ್ ಕಿಂಗ್ಸ್‌ಗೆ ಡಬಲ್ ಶಾಕ್: ಸ್ಟಾರ್ ವೇಗಿ ಸೇರಿ ಇಬ್ಬರು ಕ್ರಿಕೆಟಿಗರಿಗೆ ಸೋಂಕು..!
ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಲಿದ್ದು, ದುಬೈ, ಅಬುದಾಬಿ ಹಾಗೂ ಶಾರ್ಜಾದಲ್ಲಿ ಪಂದ್ಯಾಟಗಳು ನಡೆಯಲಿದೆ.