ಅಬುಧಾಬಿ(ನ.08): ಇಲ್ಲಿ ಶುಕ್ರವಾರ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ 6 ವಿಕೆಟ್‌ಗಳ ವಿರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಟ್ವೀಟರ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ಆರ್‌ಸಿಬಿ ತಂಡದ ಫೋಟೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

‘ಏರಿಳಿತದಲ್ಲಿ ಒಟ್ಟಿಗೆ ಸಾಗಿದ್ದೇವೆ. ಒಂದು ಘಟಕವಾಗಿ ಇದೊಂದು ನಮ್ಮ ಶ್ರೇಷ್ಠ ಪಯಣ. ಹೌದು, ಕೆಲವೊಂದು ವಿಷಯ ನಾವು ಯೋಚಿಸಿದಂತೆ ನಡೆಯಲಿಲ್ಲ. ಆದರೆ ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ನಿಮ್ಮ ಬೆಂಬಲಕ್ಕಾಗಿ ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮನ್ನು ಹೆಚ್ಚು ಶಕ್ತಿಶಾಲಿಯನ್ನಾಗಿಸುತ್ತದೆ. ನಿಮ್ಮೆಲ್ಲರನ್ನೂ ಶೀಘ್ರವೇ ನೋಡುವೆ’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಚರ್ಚೆ ಶುರು

ನವದೆಹಲಿ: ಹೈದ್ರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದರಿಂದ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ಕೊಹ್ಲಿ ನಾಯಕತ್ವ ತ್ಯಜಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ. 

IPL 2020: ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಎಡವಿದ್ದೆಲ್ಲಿ..?

8 ವರ್ಷಗಳು ಬೇಕಾದಷ್ಟು ಸಮಯವಾಯಿತು. ಎಂ.ಎಸ್‌. ಧೋನಿ ಹಾಗೂ ರೋಹಿತ್‌ ಶರ್ಮಾ ಬಗ್ಗೆ ಮಾತನಾಡುತ್ತೇವೆ. ಧೋನಿ, ರೋಹಿತ್‌ ಯಶಸ್ಸು ಸಾಧಿಸಿದ್ದಾರೆ. ಹಾಗೆ ಕೊಹ್ಲಿ ಬಗ್ಗೆಯೂ ಮಾತನಾಡುತ್ತೇವೆ. ಸೋಲು ಎಂದಾಗೆಲ್ಲಾ ಕೊಹ್ಲಿಯನ್ನು ನೆನಪು ಮಾಡಿಕೊಳ್ಳುವಂತಾಗಿದೆ. ಹೀಗಾಗಿ ಕೊಹ್ಲಿಯನ್ನು ನಾಯಕತ್ವದಿಂದ ಕೈ ಬಿಡುವುದೇ ಸೂಕ್ತ ಎಂದು ಗಂಭೀರ್‌ ಹೇಳಿದ್ದಾರೆ.

ಮತ್ತೊಬ್ಬ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌, ಕೊಹ್ಲಿಯನ್ನು ನಾಯಕತ್ವದಿಂದ ಇಳಿಸುವುದೇ ಪರಿಹಾರವಲ್ಲ ಎಂದಿದ್ದಾರೆ. ಕೊಹ್ಲಿ ಅದ್ಭುತ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ತಂಡದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಅದನ್ನು ಬಿಟ್ಟು ತಂಡದ ನಾಯಕತ್ವದಿಂದ ಕೊಹ್ಲಿಯನ್ನು ತೆಗೆದುಹಾಕುವುದು ಸಮಸ್ಯೆಗೆ ಪರಿಹಾರ ಆಗುವುದಿಲ್ಲ ಎಂದು ಸೆಹ್ವಾಗ್‌ ಹೇಳಿದ್ದಾರೆ.