ಕೊರೋನಾ ನೆಗೆಟಿವ್ ಬೆನ್ನಲ್ಲೇ ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ
ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರಾಂಚಿಯಿಂದ ಹೊರಟು ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಬಂದಿಳಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ(ಆ.15): ಐಪಿಎಲ್ ಟೂರ್ನಿಗೆ ಈಗಾಗಲೇ ಅಭ್ಯಾಸ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊರೋನಾ ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದಿದೆ. ಇಷ್ಟುದಿನ ತವರು ರಾಂಚಿಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದ ಧೋನಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.
ಕೊರೋನಾ ವರದಿ ನೆಗೆಟಿವ್ ಎಂದು ತಿಳಿದ ಬಳಿಕ ತಂಡದ ಉಳಿದ ಆಟಗಾರರ ಜತೆಗೂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಐಪಿಎಲ್ ಟೂರ್ನಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಚೆನ್ನೈ ತಂಡದ ತರಬೇತಿ ಶಿಬಿರ ಆರಂಭಗೊಂಡಿದೆ. ಧೋನಿ ಅವರು ರಾಂಚಿಯ ಆಸ್ಪತ್ರೆಯಲ್ಲಿ ತಮ್ಮ ತಂಡದ ಇನ್ನೊಬ್ಬ ಆಟಗಾರ ಮೋನು ಕುಮಾರ್ ಸಿಂಗ್ ಅವರ ಜೊತೆಯಲ್ಲೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು.
ಈಗಾಗಲೇ ಸೂಪರ್ ಕಿಂಗ್ಸ್‌ನ ಹಲವು ಆಟಗಾರರು ಚೆನ್ನೈಗೆ ಬಂದಿಳಿದಿದ್ದಾರೆ. ಶನಿವಾರದಿಂದ ಆರಂಭವಾಗಲಿರುವ ಒಂದು ವಾರದ ಅಭ್ಯಾಸ ಶಿಬಿರಕ್ಕೆ ಸುರೇಶ್ ರೈನಾ, ದೀಪಕ್ ಚಹರ್, ಪೀಯೂಷ್ ಚಾವ್ಲಾ, ಹಾಗೂ ಕೇದಾರ್ ಜಾಧವ್ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಭಾರತದ 16 ಆಟಗಾರರ ಪೈಕಿ ಧೋನಿಯು ಸೇರಿದಂತೆ 13-14 ಆಟಗಾರರು ಚೆನ್ನೈನ ಎಂ ಎ ಚಿದಂಬರಂ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದಾರೆ.
IPL 2020: ಧೋನಿ ಕೊರೋನಾ ಟೆಸ್ಟ್ ರಿಪೋರ್ಟ್ ಔಟ್..!
ಧೋನಿ ಚೆನ್ನೈಗೆ ಬಂದಿಳಿಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಧೋನಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವುದನ್ನು ಅವರ ಅಭಿಮಾನಿಗಳು ಆಸೆಗಣ್ಣಿನಿಂದ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.