Asianet Suvarna News Asianet Suvarna News

ದಿಲ್ಲಿ ಗಣರಾಜ್ಯೋತ್ಸವಕ್ಕೆ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಟ್ಯಾಬ್ಲೋ!

ರಾಜ್ಯವನ್ನು ಪ್ರತಿನಿಧಿಸಲಿದೆ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಏಕಮಾತ್ರ ಅಧಿವೇಶನದ ಸ್ತಬ್ಧಚಿತ್ರ 

Tableau with 1924 Belgaum Congress session chosen for Republic Day Parade
Author
New Delhi, First Published Jan 13, 2019, 9:21 AM IST

ಬೆಳಗಾವಿ[ಜ.13]: ಜ.26ರಂದು ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲದಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ. ಖ್ಯಾತ ಕಲಾವಿದ ಶಶಿಧರ ಅಡಪ ನೇತೃತ್ವದಲ್ಲಿ ಸ್ತಬ್ಥಚಿತ್ರ ಮೈದಳೆಯಲಿದೆ.

150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ವರ್ಷ ಗಾಂಧೀಜಿ ಅವರ ಪರಿಕಲ್ಪನೆ ಆಧಾರದ ಮೇಲೆ ಸ್ತಬ್ಧಚಿತ್ರಗಳನ್ನು ನಿರೂಪಿಸಬೇಕೆಂದು ಪಥಸಂಚಲನದ ಹೊಣೆ ಹೊತ್ತಿರುವ ರಕ್ಷಣಾ ಇಲಾಖೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯು, ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ೧೯೨೪ರ ಡಿ.೨೬ ಮತ್ತು ೨೭ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ನ 39ನೇ ಅಧಿವೇಶನದ ಪರಿಕಲ್ಪನೆಗೆ ರಕ್ಷಣಾ ಇಲಾಖೆ ಸಮ್ಮತಿ ಸೂಚಿಸಿದೆ. ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಏಕಮಾತ್ರ ಅಧಿವೇಶನವಾಗಿ ಬೆಳಗಾವಿ ಅಧಿವೇಶನ ಚರಿತ್ರಾರ್ಹವಾಗಿ ಉಳಿದಿದೆ.

ವಿಜಯನಗರದ ಆವರಣ: ಸ್ತಬ್ಧ ಚಿತ್ರದ ಮುಂಭಾಗದಲ್ಲಿ ‘ಸ್ವತಂತ್ರದ ದೇಗುಲ’ ಎಂಬ ಪರಿಕಲ್ಪನೆಯಲ್ಲಿ ವಿಜಯನಗರದ ಶೈಲಿಯಲ್ಲಿ ವಿರೂಪಾಕ್ಷ ದೇಗುಲದ ಗೋಪುರ ಇರಲಿದೆ.ಇಡೀ ಸ್ತಬ್ಧಚಿತ್ರದ ಆವರಣವನ್ನು ವಿಜಯನಗರ ಎಂದು ಕರೆಯಲಾಗುತ್ತದೆ. ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಮೊತ್ತ ಮೊದಲ ಬಾರಿಗೆ ಇಲ್ಲಿ ಧ್ವಜವಂದನೆ ನಡೆಸಲಾಗಿತ್ತು. ಅಂದು ತ್ರಿವರ್ಣ ಧ್ವಜವು ಬಿಳಿ, ಹಸಿರು ಮತ್ತು ಕೆಂಪು ಬಣ್ಣ ಹೊಂದಿದ್ದು ಮಧ್ಯಭಾಗದಲ್ಲಿ ಚರಕವಿತ್ತು. ಸ್ತಬ್ಧಚಿತ್ರದ ಮಧ್ಯ ಮತ್ತು ಹಿಂಭಾಗವು ಮಹಾತ್ಮಾ ಗಾಂಧಿ ಅಧ್ಯಕ್ಷೀಯ ಭಾಷಣದ ಸಂದರ್ಭವನ್ನು ನೆನಪಿಸುವಂತಿರುತ್ತದೆ. ಭಾರತದ ರಾಷ್ಟ್ರ ಧ್ವಜದ ವಿಕಾಸದ ಕಥೆ ಕೂಡ ಸ್ತಬ್ಧಚಿತ್ರ ದಲ್ಲಿ ಬಿಂಬಿಸಲಾಗುತ್ತದೆ. ಕರ್ನಾಟಕ ರಾಜ್ಯ ಉದಯದ ಮೊದಲ ಬಿಂದು ಎಂದೇ ಹೇಳಲಾಗುವ ಹುಯಿಲಗೋಳ ನಾರಾಯಣ ರಾಯರು ಬರೆದು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನದಲ್ಲಿ ಅವರೇ ಹಾಡಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡು ಸಹ ಹಿನ್ನೆಲೆಯಲ್ಲಿ ಕೇಳಿ ಬರಲಿದೆ.

ಸತತ 9ನೇ ಬಾರಿ ಭಾಗಿ:

2019ರ ಗಣ ರಾಜ್ಯೋತ್ಸವದ ಸ್ತಬ್ಧಚಿತ್ರ ಪಥ ಸಂಚಲನದಲ್ಲಿ ಭಾಗಿಯಾಗುವುದರೊಂದಿಗೆ ಸತತ 9ನೇ ವರ್ಷ ಕರ್ನಾಟಕದ ಟ್ಯಾಬ್ಲೋ ಪಾಲ್ಗೊಂಡಂತಾಗಲಿದೆ. ಪಥ ಸಂಚಲನದ ಸಂಪೂರ್ಣ ಹೊಣೆ ರಕ್ಷಣಾ ಇಲಾಖೆ ಯದ್ದು. ರಕ್ಷಣಾ ಇಲಾಖೆಯ ಡಿ ಸೆರಾಮೋನಿಯಲ್ ವಿಂಗ್ (ಗಣರಾಜ್ಯೋತ್ಸವ ಶಾಖೆ) ಸ್ತಬ್ಧಚಿತ್ರಗಳ ಆಯ್ಕೆಯ ಹೊಣೆ ನಿರ್ವಹಿಸುತ್ತದೆ. ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಮುಂತಾದವುಗಳಲ್ಲಿ ಉನ್ನತ ಸಾಧನೆ ಮಾಡಿದ ಸಾಧಕ ರನ್ನೊಳಗೊಂಡ ಸಮಿತಿಯು ಪಥ ಸಂಚಲನದಲ್ಲಿ ಭಾಗವಹಿ ಸುವ ರಾಜ್ಯಗಳ ಪಟ್ಟಿಯನ್ನು ಅಖೈರುಗೊಳಿಸಲಾಗುತ್ತದೆ. ಸ್ತಬ್ಧಚಿತ್ರಗಳು ರಕ್ಷಣಾ ಇಲಾಖೆಯ ನೀತಿ ನಿಯಮಗ ಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಯಾವುದೇ ಕ್ಷಣದಲ್ಲೂ ಸ್ತಬ್ಧಚಿತ್ರಗಳನ್ನು ರದ್ದು ಪಡಿಸಬಹುದಾಗಿದೆ.

ಮಸ್ತಾಕಾಭಿಷೇಕಕ್ಕೆ ಪ್ರಥಮ ಬಹು ಮಾನ: ರಾಜ್ಯವು 2011ರಲ್ಲಿ ಬಿದರಿ ಕಲೆ (ತೃತೀಯ ಸ್ಥಾನ), 2012ರಲ್ಲಿ ಭೂತಾ ರಾಧನೆ (ದ್ವಿತೀಯ ಸ್ಥಾನ), 2013ರಲ್ಲಿ ಕಿನ್ನಾಳ ಕಲೆ, 2014ರಲ್ಲಿ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್, 2015ರಲ್ಲಿ ಚನ್ನಪಟ್ಟಣದ ಗೊಂಬೆ (ತೃತೀಯ ಸ್ಥಾನ), 2016ರಲ್ಲಿ ಕಾಫಿ ನಾಡು-ಕೊಡಗು, 2017ರಲ್ಲಿ ಕರ್ನಾ ಟಕದ ಜನಪದ ವೈಭವ, 2018ರಲ್ಲಿ ಕರ್ನಾಟಕದ ವನ್ಯಜೀವಿಗಳು ಎಂಬ ಥೀಮ್‌ನೊಂದಿಗೆ ಪಥ ಸಂಚಲನದಲ್ಲಿ ಭಾಗವಹಿಸಿತ್ತು. 2008ರಲ್ಲಿ ಪಟ್ಟದಕಲ್ಲು ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಿತ್ತು. 2009ರಲ್ಲಿ ಬಾಹುಬಲಿ ಮೂರ್ತಿಯ ಮಸ್ತಾಕಾಭಿಷೇಕ ಸ್ತಬ್ಧ ಚಿತ್ರಕ್ಕೆ ರಾಜ್ಯ ಪ್ರಥಮ ಸ್ಥಾನ ಪಡೆದಿತ್ತು. ಸ್ತಬ್ಧಚಿತ್ರದಲ್ಲಿ ಭಾಗಿಯಾಗುವ ವಿಷಯಗಳ ಪಟ್ಟಿ ರಚನೆ, ಸಮನ್ವಯ, ನಿರ್ಮಾಣ ಹೊಣೆ ಎಲ್ಲವೂ ರಾಜ್ಯ ವಾರ್ತಾ ಇಲಾಖೆಗೆ ಸೇರಿರುತ್ತದೆ.

- ರಾಕೇಶ್ ಎನ್.ಎಸ್.

Follow Us:
Download App:
  • android
  • ios