Asianet Suvarna News Asianet Suvarna News

ಸಿಬಿಐ ಬಾಸ್‌ ರಹಸ್ಯ ವರದಿಯೇ ಸೋರಿಕೆ!: ನಾರಿಮನ್‌ಗೆ ಶಾಕ್!

ಕೋರ್ಟಿಗೆ ಸಲ್ಲಿಕೆಯಾಗಿದ್ದ ವರದಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ರಹಸ್ಯ ಕಾಪಾಡದ್ದಕ್ಕೆ ಸುಪ್ರೀಂಕೋರ್ಟ್‌ ಕೆಂಡಾಮಂಡಲಗೊಂಡಿದೆ. ಆದರೆ ‘ಕಾವೇರಿ’ ವಕೀಲ ನಾರಿಮನ್‌ ಇದು ಹಳೆಯ ವರದಿ ಎಂದಿದ್ದು, ಈ ವೇಳೆ, ಹಳತಲ್ಲ, ಹೊಸದು ಎಂದು ನ್ಯಾಯಮೂರ್ತಿಗಳು ವರದಿ ಕೈಗಿಟ್ಟಿದ್ದಾರೆ. ಸೋರಿಕೆಯಾದ ವರದಿ ಕಂಡು ಸಿದ್ಧಪಡಿಸಿದ್ದ ನಾರಿಮನ್‌ಗೇ ದಿಗ್ಭ್ರಮೆಯಾಗಿದೆ. ವರದಿ ಮಾಡಿದವರಿಗೆ ಸಮನ್ಸ್‌ ನೀಡಲು ಹಿರಿಯ ನ್ಯಾಯವಾದಿ ಮನವಿ ಮಾಡಿಕೊಂಡಿದ್ದಾರೆ.

Supreme Court Fumes Over Leak In CBI Case
Author
New Delhi, First Published Nov 21, 2018, 10:37 AM IST

ನವದೆಹಲಿ[ನ.21]: ಸದ್ಯ ಕಡ್ಡಾಯ ರಜೆ ಮೇಲೆ ಇರುವ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅವರು ತಮ್ಮ ವಿರುದ್ಧದ ಆರೋಪಗಳ ಕುರಿತಂತೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟಿಗೆ ಸೋಮವಾರ ಸಲ್ಲಿಸಿದ್ದ ವರದಿಯೇ ಸೋರಿಕೆಯಾಗಿದೆ. ಇದು ಸರ್ವೋಚ್ಚ ನ್ಯಾಯಾಲಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸೋರಿಕೆಯಾದ ವರದಿಯನ್ನು ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅವರ ವಕೀಲರೂ ಆಗಿರುವ ದೇಶದ ಹಿರಿಯ ನ್ಯಾಯವಾದಿ ಫಾಲಿ ಎಸ್‌. ನಾರಿಮನ್‌ ಅವರಿಗೆ ನ್ಯಾಯಮೂರ್ತಿಗಳೇ ನೀಡಿದ್ದಾರೆ. ತಾವೇ ಸಿದ್ಧಪಡಿಸಿ, ಸಲ್ಲಿಸಿದ್ದ ರಹಸ್ಯ ವರದಿ ವೆಬ್‌ಸೈಟ್‌ವೊಂದರಲ್ಲಿ ಪ್ರಕಟವಾಗಿರುವುದನ್ನು ಕಂಡು ಸ್ವತಃ ನಾರಿಮನ್‌ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ವರದಿ ಮಾಡಿದ ಪತ್ರಕರ್ತರಿಗೆ ಸಮನ್ಸ್‌ ಜಾರಿ ಮಾಡಿ ಎಂದು ನ್ಯಾಯಮೂರ್ತಿಗಳಿಗೆ ಕೋರಿಕೆ ಇಟ್ಟಿದ್ದಾರೆ.

ಇದೇ ವೇಳೆ, ಕೇಂದ್ರ ಸಚಿವ ಹರಿಭಾಯ್‌ ಪಾರ್ಥಿಭಾಯ್‌ ಚೌಧರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ವಿರುದ್ಧ ಗಂಭೀರ ಆಪಾದನೆಗಳು ಇದ್ದ ಅರ್ಜಿ ಸೋರಿಕೆಯಾಗಿದ್ದಕ್ಕೂ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ತ್ರಿಸದಸ್ಯ ಪೀಠ ತೀವ್ರ ಆಕ್ಷೇಪ ಎತ್ತಿದೆ. ವಿಚಾರಣೆಗೆ ನೀವ್ಯಾರೂ ಅರ್ಹರಲ್ಲ ಎಂದು ತೀಕ್ಷ$್ಣ ಮಾತುಗಳಲ್ಲಿ ಕಕ್ಷಿದಾರರನ್ನು ಚುಚ್ಚಿ, ವಿಚಾರಣೆಯನ್ನು ನ.29ಕ್ಕೆ ಮುಂದೂಡಿದೆ.

ಸಿಬಿಐ ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರ ನಡುವಣ ಬಹಿರಂಗ ಜಟಾಪಟಿ ಬಳಿಕ ನಾಟಕೀಯ ತಿರುವುಗಳನ್ನು ಪಡೆದು ಸಾಗುತ್ತಿರುವ ‘ಸಿಬಿಐ ವರ್ಸಸ್‌ ಸಿಬಿಐ’ ಪ್ರಕರಣ ಇದರೊಂದಿಗೆ ಮತ್ತೊಂದು ಹೈಡ್ರಾಮಾಕ್ಕೆ ಸಾಕ್ಷಿಯಾದಂತಾಗಿದೆ.

ಏನಿದು ರಾದ್ಧಾಂತ?:

ಸಿಬಿಐ ಮುಖ್ಯಸ್ಥರಾಗಿರುವ ತಮ್ಮನ್ನು ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ಅಲೋಕ್‌ ವರ್ಮಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಉಪಮುಖ್ಯಸ್ಥ ರಾಕೇಶ್‌ ಅಸ್ಥಾನಾ ಅವರು ವರ್ಮಾ ವಿರುದ್ಧ ಮಾಡಿದ್ದ ಆರೋಪಗಳ ಕುರಿತಂತೆ ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಮುಖ್ಯ ವಿಚಕ್ಷಣ ಆಯೋಗ (ಸಿವಿಸಿ)ಕ್ಕೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಅದರಂತೆ ಸಿವಿಸಿ ಕಳೆದ ವಾರ ವರದಿ ಸಲ್ಲಿಸಿತ್ತು. ಅದಕ್ಕೆ ಸೋಮವಾರದೊಳಗೆ ಮುಚ್ಚಿದ ಲಕೋಟೆಯಲ್ಲೇ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ವರ್ಮಾ ಅವರಿಗೆ ಸೂಚಿಸಿತ್ತು. ಅಲೋಕ್‌ ವರ್ಮಾ ಅವರು ವರದಿ ಸಲ್ಲಿಕೆ ಮಾಡಿದ್ದರು. ಆದರೆ ಈ ವರದಿ ‘ವೈರ್‌’ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು.

ಮಂಗಳವಾರದ ವಿಚಾರಣೆ ವೇಳೆ, ವರ್ಮಾ ಅವರ ರಹಸ್ಯ ವರದಿ ಸೋರಿಕೆಯಾಗಿರುವುದಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು. ಆದರೆ, ಇಂದೇ ವಿಚಾರಣೆ ನಡೆಸಿ ಎಂದು ನಾರಿಮನ್‌ ಹಾಗೂ ವರ್ಮಾ ಅವರ ಪರ ಮತ್ತೊಬ್ಬ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಮನವಿ ಮಾಡಿದರು. ‘ನ.16ರಂದು ವರದಿ ನೀಡುವಂತೆ ಸಿವಿಸಿಗೆ ಸೂಚಿಸಿದ್ದಿರಿ. ಅವರು ವರದಿ ಕೊಟ್ಟಿದ್ದಾರೆ. ನ.17ರಂದು ವೆಬ್‌ಸೈಟ್‌ ಪ್ರಕರಣದ ಕುರಿತು ವರದಿ ಮಾಡಿದೆ. ಆ ವರದಿ ಸಿವಿಸಿ ನಡೆಸಿದ ಪ್ರಾಥಮಿಕ ವಿಚಾರಣೆಗೆ ಸಂಬಂಧಿಸಿದ್ದಾಗಿದೆ’ ಎಂದು ವಾದಿಸಿದರು.

ನಾಗಪುರಕ್ಕೆ ವರ್ಗಾವಣೆಯಾಗಿದ್ದನ್ನು ಪ್ರಶ್ನಿಸಿ ಸಿಬಿಐ ಡಿಐಜಿ ಮನೀಶ್‌ ಕುಮಾರ್‌ ಸಿನ್ಹಾ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಗಂಭೀರ ಆಪಾದನೆಗಳನ್ನು ಮಾಡಿದ್ದರು. ಅದೂ ಸೋರಿಕೆಯಾಗಿದೆ ಎಂದು ಹೇಳಿದ ನ್ಯಾಯಪೀಠ, ‘ಇದು ನಿನ್ನೆ ಪ್ರಕಟವಾಗಿರುವ ವರದಿ. ಇಲ್ಲಿ ಏನು ನಡೆಯುತ್ತಿದೆ? ಜನರು ಇಲ್ಲಿಗೆ ಬಂದು ತಮಗಿಷ್ಟಬಂದದ್ದನ್ನು ಹೇಳಿ ಹೋಗುವ ವೇದಿಕೆ ಇದಲ್ಲ. ಕಾನೂನು ಹಕ್ಕುಗಳ ನಿರ್ಣಯಕ್ಕಾಗಿ ಜನರು ಇಲ್ಲಿ ಬರುತ್ತಾರೆ. ಅರ್ಜಿದಾರರು ನಮ್ಮ ಮುಂದೆ ಅರ್ಜಿ ಸಲ್ಲಿಸಿ, ಅದನ್ನು ಹೊರಗೆ ಹೋಗಿ ಪ್ರತಿಯೊಬ್ಬರಿಗೂ ಹಂಚಿದ್ದಾರೆ. ಸಂಸ್ಥೆಯ ಗೌರವವನ್ನು ಗೌರವಿಸುವ ನಮ್ಮ ಪ್ರಯತ್ನ ಇವರಿಗೆ ಅರ್ಥವಾಗುತ್ತಿಲ್ಲ’ ಎಂದು ಪೀಠ ಸಿಡಿಮಿಡಿ ವ್ಯಕ್ತಪಡಿಸಿತು.

ಇದೇ ವೇಳೆ, ವರ್ಮಾ ಅವರ ಪ್ರತಿಕ್ರಿಯೆ ಕುರಿತು ವೆಬ್‌ಸೈಟ್‌ ಮಾಡಿರುವ ವರದಿಯ ಪ್ರತಿಯೊಂದನ್ನು ನಾರಿಮನ್‌ ಅವರಿಗೆ ನೀಡಿತು. ನೀವೊಬ್ಬರು ಗೌರವಾನ್ವಿತರು ಹಾಗೂ ಹಿರಿಯರು ಎಂದು ಇದನ್ನು ನೀಡುತ್ತಿದ್ದೇವೆ. ನೀವೇ ನಮ್ಮನ್ನು ಕಾಪಾಡಿ ಎಂದು ನ್ಯಾಯಪೀಠ ಹೇಳಿತು.

ವೆಬ್‌ಸೈಟ್‌ ವರದಿಯನ್ನು ಪರಿಶೀಲಿಸಿದ ನಾರಿಮನ್‌ ಕೂಡ ಕೋಪಗೊಂಡರು. ‘ಇದು ಸಂಪೂರ್ಣ ಅಕ್ರಮ. ಇದನ್ನು ನೋಡಿ, ನನಗೆ ದಿಗ್ಭ್ರಮೆಯಾಗಿದೆ. ನೋವಾಗಿದೆ’ ಎಂದು ಹೇಳಿದರು.

ವರ್ಮಾ ಅವರ ಮತ್ತೊಬ್ಬ ವಕೀಲರಾಗಿರುವ ಶಂಕರನಾರಾಯಣನ್‌ ಅವರು, ಸಿಬಿಐ ನಿರ್ದೇಶಕರ ಪರ ಪ್ರತಿಕ್ರಿಯೆ ಸಲ್ಲಿಸಲು ಸೋಮವಾರ ಹೆಚ್ಚಿನ ಕಾಲಾವಕಾಶ ಕೇಳಿದ್ದರು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಇದನ್ನು ಕೇಳಿ ದಂಗಾದ ನಾರಿಮನ್‌ ಅವರು, ‘ಶಂಕರನಾರಾಯಣನ್‌ ಅವರಿಗೆ ಆ ರೀತಿ ಯಾರೂ ಹೇಳಿರಲಿಲ್ಲ. ಇದು ಸಂಪೂರ್ಣ ಅಕ್ರಮ. ಈ ಬಗ್ಗೆ ನನಗೂ ಮಾಹಿತಿ ಇಲ್ಲ. ನಾನು ಹಾಗೂ ನನ್ನ ಕಿರಿಯ ವಕೀಲರು ರಾತ್ರಿವರೆಗೂ ಕಷ್ಟಪಟ್ಟು ವರ್ಮಾ ಅವರ ಪ್ರತಿಕ್ರಿಯೆ ಸಿದ್ಧಪಡಿಸಿದ್ದೇವೆ’ ಎಂದು ಹೇಳಿದರು.

ಅಲ್ಲದೆ ಮಾಧ್ಯಮದಲ್ಲಿ ಪ್ರತಿಕ್ರಿಯೆ ಸೋರಿಕೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಸಂಬಂಧಿಸಿದ ಪತ್ರಕರ್ತರಿಗೆ ಸಮನ್ಸ್‌ ಜಾರಿ ಮಾಡಿ ಎಂದು ಕೋರಿದರು. ನ್ಯಾಯಪೀಠ ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು. ಇದಕ್ಕಾಗಿ ಯಾವುದೇ ಕಾರಣ ನೀಡುವುದಿಲ್ಲ. ಇನ್ನಷ್ಟುವಿಚಾರಣೆಗೆ ನೀವ್ಯಾರೂ ಅರ್ಹರಲ್ಲ ಎಂದು ನಮಗೆ ಅನ್ನಿಸುತ್ತಿದೆ ಎಂದು ತೀಕ್ಷ್ಣ ಮಾತುಗಳಲ್ಲಿ ಚುಚ್ಚಿತು.

Follow Us:
Download App:
  • android
  • ios