Asianet Suvarna News Asianet Suvarna News

ಅಹಮದಾಬಾದ್ ಆಗಲ್ಲ ಕರ್ಣಾವತಿ!: ಕಾರಣ ಇಲ್ಲಿದೆ

ಸದ್ಯಕ್ಕಿರುವ ಪರಿಸ್ಥಿಯತಿಯಲ್ಲಿ ಅಹಮದಾಬಾದ್ ಮರುನಾಮಕರಣ ಅಸಾಧ್ಯ ಎನ್ನಲಾಗುತ್ತಿದೆ. ಒಂದು ವೇಳೆ ಅಹಮದಾಬಾದ್ ಹೆಸರು ಮರು ನಾಮಕರಣ ಮಾಡಿದರೆ ಕಳೆದ ವರ್ಷವಷ್ಟೇ ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ. 

Renaming ahmedabad as karnavati is difficult here is the reason
Author
Ahmedabad, First Published Nov 10, 2018, 3:16 PM IST

ಅಹಮದಾಬಾದ್[ನ.11]: ಗುಜರಾತ್ ಡಿಸಿಎಂ ಈಗಾಗಲೇ ಅಹಮದಾಬಾದ್ ಹೆಸರನ್ನು ಬದಲಾಯಿಸಿ ಕರ್ಣಾವತಿ ಎಂದಿಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎನ್ನಲಾಗುತ್ತಿದೆ. ಒಂದು ವೆಳೆ ಅಹಮದಾಬಾದ್ ಹೆಸರು ಮರು ನಾಮಕರಣ ಮಾಡಿದರೆ ಕಳೆದ ವರ್ಷವಷ್ಟೇ ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಗುರುತು ಕಳೆದುಕೊಳ್ಳಬೇಕಾಗುತ್ತದೆ. 

ಇದಕ್ಕೂ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೈಜಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದರು. ಅದಕ್ಕೂ ಮುನ್ನ ಅಲಹಾಬಾದ್ ಹೆಸರು ಬದಲಾಯಿಸಿ ಪ್ರಯಾಗ್‌ರಾಜ್ ಎಂದೂ ಬದೆಲಾಯಿಸಲಾಗಿತ್ತು. ಇದಾದ ಬಳಿಕವೇ ಗುಜರಾತ್‌ನ ಉಪ ಮುಖ್ಯಮಂತ್ರಿ ನಿತಿನ್ನ್‌ ಪಟೇಲ್ ಅಹಮದಾಬಾದ್ ಹೆಸರು ಬದಲಾಯಿಸಿ ಕರ್ಣಾವತಿ ಎಂದು ಮರು ನಾಮಕರಣ ಮಾಡಲು ಗುಜರಾತ್ ಸರ್ಕಾರ ಚಿಂತಿಸುತ್ತಿದೆ ಎಂದಿದ್ದರು. 

ಹಳೆ ಅಹಮದಾಬಾದ್‌ನಲ್ಲಿ ಕರ್ಣಮುಕ್ತೇಶ್ವರ ಎಂಬ ಪ್ರಾಚೀನ ಮಂದಿರವಿದೆ. ಇದೇ ಕಾರಣದಿಂದಾಗಿ ಸಂಘ ಪರಿವಾರ ದೀರ್ಘ ಸಮಯದಿಂದ ಈ ನಗರದ ಹೆಸರು ಬದಲಾಯಿಸಿ ಕರ್ಣಾವತಿ ಎಂದಿಡಬೇಕೆಂದು ಒತ್ತಾಯಿಸುತ್ತಿದೆ. 

ಇದಕ್ಕೂ ಮೊದಲು ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ, ಅಹಮದಾಬಾದ್ ಹೆಸರು ಬದಲಾಯಿಸಿ ಕರ್ಣಾವತಿ ಎಂದಿಡುವ ಪ್ರಯತ್ನ ನಡೆಸಲಾಗಿತ್ತು. ಅಂದು ಅಹಮದಾಬಾದ್ ಪುರಸಭೆ ಹಾಗೂ ಗುಜರಾತ್ ವಿಧಾನಸಭೆ ಎರಡೂ ಕಡೆ ಬಿಜೆಪಿಯೇ ಅಧಿಕಾರದಲ್ಲಿತ್ತು. ಹೀಗಿದ್ದರೂ ನಗರದ ಹೆಸರು ಬದಲಾಯಿಸಲು ಸಾಧ್ಯವಾಗಿರಲಿಲ್ಲ. NDA ಮೈತ್ರಿ ಪಕ್ಷಗಳಾದ AIADMK ಹಾಗೂ ತೃಣಮೂಲ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಪ್ರಮುಖ ಕಾರಣವಾಗಿತ್ತು.

ಇದೀಗ ಮತ್ತೊಮ್ಮೆ ಬಿಜೆಪಿ ಎರಡೂ ಕಡೆ ಅಧಿಕಾರದಲ್ಲಿದೆ. ಆದರೆ ಈ ಬಾರಿ ನಗರದ ಹೆಸರು ಬದಲಾಯಿಸಲು ತೊಡಕಾಗಿರುವುದು ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಲೇಬಲ್.

ಇನ್ನು ಅಹಮದಾಬಾದ್ದ್‌ಗೆ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲು ಸೂಚಿಸಿದ ಸದಸ್ಯರಲ್ಲೊಬ್ಬರಾದ ದೇಬಾಶೀಷ್ ಮಾತನಾಡುತ್ತಾ "ಯಾವ ಪ್ರಾಚೀನ ಕಟ್ಟಡಗಳಿಗಾಗಿ ಅಹಮದಾಬಾದ್ದ್‌ಗೆ ವಿಶ್ವ ಪಾರಂಪರಿಕ ತಾಣ ಎಂಬ ಮನ್ನಣೆ ಸಿಕ್ಕಿದೆಯೋ ಅವೆಲ್ಲವೂ, ಅಹಮದಾಬಾದ್ ಎಂಬ ಹೆಸರಿರುವಾಗಲೇ ನಿರ್ಮಾಣಗೊಂಡಿವೆ. ಅಲ್ಲದೇ ಬದಲಾಯಿಸಬೇಕೆಂದು ಸೂಚಿಸಲಾದ ಅಶಾವಲ್ ಹಾಗೂ ಕರ್ಣಾವತಿ ಎಂಬುವುದು ಚಿಕ್ಕ ಪುಟ್ಟ ಪ್ರದೇಶವಾಗಿತ್ತು. ಇದು ಕ್ರಮೇಣ ಅಹಮದಾಬಾದ್ ಜೊತೆಗೆ ಸೇರ್ಪಡೆಗೊಂಡವು ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಒಂದು ವೇಳೆ ಬಿಜೆಪಿಯು ಹಠ ಮುಂದುವರೆಸಿ ಅಹಮದಾಬಾದ್ ಹೆಸರು ಬದಲಾಯಿಸಿದರೆ ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಪಟ್ಟ ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. 

Follow Us:
Download App:
  • android
  • ios