ನವದೆಹಲಿ: ಕೇಂದ್ರ ಸರ್ಕಾರ ನೀಡುವ 2019ನೇ ಸಾಲಿನ ಪದ್ಮ ಪ್ರಶಸ್ತಿಗಾಗಿ 49,992 ಅರ್ಜಿಗಳು ಬಂದಿದ್ದು, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಈ ಪ್ರಮಾಣದ ನಾಮ ನಿರ್ದೇಶನಗಳು ಬಂದಿರುವುದು ಇದೇ ಮೊದಲು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

2019ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗಾಗಿ 49,992 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣಕ್ಕೆ ನೇರವಾಗಿ ನಾಮ ನಿರ್ದೇಶನ ಮಾಡಿಕೊಳ್ಳಲು ಸಾರ್ವಜನಿಕರನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸಿತ್ತು.

ಇದರ ಭಾಗವಾಗಿ 2016ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಿತ್ತು. ಈ ಪ್ರಕಾರ 2019ನೇ ಸಾಲಿನ ಪದ್ಮ ಪುರಸ್ಕಾರಗಳಿಗಾಗಿ ಆನ್‌ಲೈನ್‌ ಅರ್ಜಿ ಪ್ರಕ್ರಿಯೆಯು 2018ರ ಮೇ 1ರಿಂದ ಆರಂಭವಾಗಿ, 2018ರ ಸೆ. 15ಕ್ಕೆ ಮುಕ್ತಾಯವಾಗಿದ್ದು, 49,992 ಅರ್ಜಿಗಳು ಬಂದಿವೆ. 2018ನೇ ಸಾಲಿನ ಪದ್ಮ ಪ್ರಶಸ್ತಿಗಾಗಿ 35595 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 2016ರಲ್ಲಿ 18,768 ಅರ್ಜಿಗಳು ಸಲ್ಲಿಕೆಯಾಗಿದ್ದವು.