ಗುಜರಾತ್ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಟೆಂಪಲ್ ರನ್ ಆರಂಭಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೂ ಅದನ್ನು ವಿಸ್ತರಿಸಿದ್ದಾರೆ. ಉಜ್ಜಯಿನಿ ಮಹಾಕಾಳೇಶ್ವರಕ್ಕೆ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಉಜ್ಜಯಿನಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ‘ಗುಡಿ-ಗುಂಡಾರ ಭೇಟಿ ಪರ್ವ’ ಮುಂದುವರಿಸಿದ್ದು, ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ, ಶಿವಲಿಂಗಕ್ಕೆ 1 ತಾಸು ಅಭಿಷೇಕ ನೆರವೇರಿಸಿದರು.

ರಾಜ್ಯಕ್ಕೆ ಚುನಾವಣಾ ಪ್ರಚಾರಾರ್ಥ 2 ದಿವಸಗಳ ಪ್ರವಾಸ ಕೈಗೊಂಡಿರುವ ರಾಹುಲ್‌, ಪಂಚೆ-ಶಲ್ಯ ಧರಿಸಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರನಿಗೆ ಪೂಜೆ ಮಾಡಿದರು. ಅವರ ಜತೆಗೇ ಮಡಿ ಉಟ್ಟುಕೊಂಡಿದ್ದ ಕಾಂಗ್ರೆಸ್‌ ಮುಖಂಡರಾದ ಕಮಲ್‌ನಾಥ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ರುದ್ರಾಭಿಷೇಕ ಮಾಡಿದರು. ಈ ವೇಳೆ ಅಭಿಷೇಕ ನೆರವೇರಿಸಿದ ಪುರೋಹಿತರು ಗಾಂಧಿ ಹಣೆಗೆ ಗಂಧದ ತಿಲಕವಿಟ್ಟು ಸಮ್ಮಾನ ಮಾಡಿದರು.

ಕಾಂಗ್ರೆಸ್ಸಿಗರು ಹೇಳುವ ಪ್ರಕಾರ ರಾಹುಲ್‌ ಗಾಂಧಿ ಜನಿವಾರಧಾರಿ ಬ್ರಾಹ್ಮಣನಾಗಿದ್ದು, ಅಪ್ಪಟ ಶಿವಭಕ್ತರಾಗಿದ್ದಾರೆ. 2010ರಲ್ಲೂ ಅವರು ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಕೂಡ ಉಜ್ಜಯಿನಿಗೆ ಕ್ರಮವಾಗಿ 1979, 1987 ಹಾಗೂ 2008ರಲ್ಲಿ ಭೇಟಿ ನೀಡಿದ್ದುಂಟು.