ಮುಂಬಯಿ: ಮೆದುಳು ರೋಗದಿಂದ ಬಳಲುತ್ತಿದ್ದ ಎರಡು ವರ್ಷದ ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕಂದಮ್ಮನ ಪೋಷಕರು ಆರು ಜೀವಗಳನ್ನು ಉಳಿಸಿದ್ದಾರೆ.

ಮೆದುಳು ನಿಷ್ಕ್ರೀಯಗೊಂಡಿದ್ದ ಮಗು ಉಳಿಯುವುದಿಲ್ಲವೆಂದು ವೈದ್ಯರು ಹೇಳಿದಾಗ, ಪೋಷಕರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಮುಂದಾದರು. ಆ ಮೂಲಕ ಕಳೆದೊಂದು ದಶಕದಲ್ಲಿಯೇ ಹೃದಯ ದಾನ ಮಾಡಿರುವ ಅತ್ಯಂತ ಕಿರಿಯ ಎಂದು ಪುಣೆಯ ಎರಡು ವರ್ಷಗಳ ಇವಾನ್ ಪ್ರಭು ಖ್ಯಾತನಾಗಿದ್ದಾನೆ.

ಈ ಮಗುವಿನ ಯಕೃತ್ತನ್ನು ನಾಲ್ಕು ವರ್ಷದ ಬಾಲಕನಿಗೆ ಕಸಿ ಮಾಡಲಾಗಿದೆ. ಅಲ್ಲದೆ ಹೃದಯ, ಕಣ್ಣು ಹಾಗೂ ಎರಡು ಕಿಡ್ನಿಗಳನ್ನೂ ದಾನ ಮಾಡಲಾಗಿದ್ದು, ಅಗತ್ಯ ರೋಗಿಗಳಿಗೆ ಕಸಿ ಮಾಡಲಾಗಿದೆ. ಚೆನ್ನೈನ ಫೋರ್ಟೀಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮೂಲಕ ಸಾಗಿಸಿ ಹೃದಯ ಕಸಿ ಮಾಡಲಾಯಿತು. ಹೃದಯವನ್ನು ಸಾಗಿಸುವಾಗ ಮುಂಬಯಿಯ ಮರೀನ್ ಲೈನ್‌ನಲ್ಲಿ ಹಸಿರು ಮಾರ್ಗ ಸೃಷ್ಟಿಸಿ, ತ್ವರಿತವಾಗಿ ಹೃದಯವನ್ನು ರವಾನಿಸಲು ವ್ಯವಸ್ಥೆ ಕಲ್ಪಿಸಲಾಯಿತು.

ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದಾಗ, ಮಗುವಿನ ಪೋಷಕರು ಅಂಗಾಂಗಗಳನ್ನು ದಾನ ಮಾಡಲು ಇಚ್ಛಿಸಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ, ಪುಣೆ ಮೂಲದ ಈ ದಂಪತಿ ತಮ್ಮ ಗುರುತು ಹೇಳಲು ಇಚ್ಛಿಸಿಲ್ಲ. 

ಈ ಪೋಷಕರ ನಿರ್ಧಾರ ಉಳಿದವರನ್ನೂ ಅಂಗಾಂಗ ದಾನ ಮಾಡಲು ಪ್ರೇರೇಪಿಸುವಂತಿದ್ದು, ಎಲ್ಲೆಡೆಯಿಂದ ಪ್ರಶಂಸೆಗಳು ಕೇಳಿ ಬರುತ್ತಿವೆ.